ಕ್ಷೇತ್ರ ಮರುವಿಂಗಡಣೆಗೆ ಮಹಿಳಾ ಮಸೂದೆ ಗುರಾಣಿ

ಲೋಕಬಂಧು ನ್ಯೂಸ್ | ಉಡುಪಿ, ಏ.18
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಗುರಾಣಿಯಾಗಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡಿಸಲು ಎಲ್ಲ ತಯಾರಿ ನಡೆಸಿತ್ತು. ಆದರೆ, ವಿರೋಧ ಪಕ್ಷಗಳು ಆ ಮಸೂದೆಯನ್ನು ಸೋಲಿಸಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕೇಂದ್ರ ಸರ್ಕಾರ ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡನೆ ಮಸೂದೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ‌ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.


2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದಿದೆ. ಆದರೆ, ಅದನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿಲ್ಲ. ಈಗ ಆ ಮಸೂದೆಯನ್ನು ಮುಂದಿಟ್ಟು ಅವೈಜ್ಞಾನಿಕ ರೀತಿಯಲ್ಲಿ ಕ್ಷೇತ್ರ ಮರುವಿಂಗಡನೆಗೆ ಹೊರಟಿದೆ. ಇದನ್ನು ಕಾಂಗ್ರೆಸ್ ಪಕ್ಷ ಸಹಿತ ಎಲ್ಲ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು  ಸೊರಕೆ ಹೇಳಿದರು.


ಕೇಂದ್ರ ಸರ್ಕಾರ ಇಂದು ಮಹಿಳಾ ಪರ ಎಂದು ಹೇಳುತ್ತಿದೆ. ಆದರೆ, ಮೊದಲ ಮಹಿಳಾ ಪ್ರಧಾನಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಿದ ಹೆಗ್ಗಳಿಗೆ ಕಾಂಗ್ರೆಸ್ ಪಕ್ಷಕ್ಕಿದೆ. ಇದೀಗ ಹಿಂಬಾಗಿಲಿನ ಮೂಲಕ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡನೆ ಮಸೂದೆ ಮಂಡಿಸುವ ಹಿಂದಿರುವ ಹುನ್ನಾರವನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ ಎಂದರು.


ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್‌'ಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಬ್ರಹ್ಮಗಿರಿ ವೃತ್ತದಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಪ್ರಮುಖರಾದ ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕಿಶನ್ ಹೆಗ್ಡೆ ಕೊಳ್ಳೆಬೈಲು, ಹರಿಪ್ರಸಾದ್ ರೈ, ಹೆಬ್ರಿ ಮಂಜುನಾಥ್ ಪೂಜಾರಿ, ಸರ್ಫುದ್ದೀನ್ ಮೊದಲಾದವರಿದ್ದರು.