ಕೋಕಾ ಪ್ರಕರಣ: ತಲೆಮರೆಸಿಕೊಂಡಿದ್ದ ಈರ್ವರ ಸೆರೆ

ಲೋಕಬಂಧು ನ್ಯೂಸ್ | ಕೋಟ, ಜೂ.11
ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅಪರಾಧ ಕ್ರಮಾಂಕ 208/2025ರ ಕೋಕಾ ಕಾಯ್ದೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆ ಹಾಗೂ ಚೇತನ್ ಯಾನೆ ಚೇತು ಪಡೀಲ್ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಸಾರ್ವಜನಿಕರಿಂದ ಮಾಹಿತಿ ಕೋರಿದ್ದ ಪೊಲೀಸರು ಮಾಹಿತಿ ನೀಡುವವರಿಗೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಸಾರ್ವಜನಿಕರು ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿ ಚೇತನ್ ಯಾನ್ ಚೇತು ಪಡೀಲ್'ನನ್ನು ಏಪ್ರಿಲ್ 30ರಂದು ಹಾಗೂ ಮತ್ತೋರ್ವ ಆರೋಪಿ ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆಯನ್ನು ಗುರುವಾರ (ಜೂನ್ 11)ದಂದು ಪೊಲೀಸರು ಬಂಧಿಸಿದ್ದಾರೆ.


ಮನೋಜ್ ಕೋಡಿಕೆರೆ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣ ಸೇರಿದಂತೆ ಒಟ್ಟು 19 ಪ್ರಕರಣ ದಾಖಲಾಗಿದ್ದು 3 ಕೊಲೆ ಪ್ರಕರಣ, 5 ಕೊಲೆ ಯತ್ನ ಪ್ರಕರಣ, 1 ಅಪಹರಣ ಹಾಗೂ 10 ಹಲ್ಲೆ ಮತ್ತು ದೊಂಬಿ ಪ್ರಕರಣ ದಾಖಲಾಗಿವೆ.


ಚೇತನ್ ವಿರುದ್ಧ ಉಡುಪಿ 2, ದಕ್ಷಿಣ ಕನ್ನಡ 2 ಮತ್ತು ಮಂಗಳೂರು ನಗರ 9 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣ ದಾಖಲಾಗಿದ್ದು 2 ಕೊಲೆ, 2 ಕೊಲೆ ಯತ್ನ ಪ್ರಕರಣ, 1 ಅಪಹರಣ, 2 ಮಾದಕ ದ್ರವ್ಯ ಸೇವನೆ ಹಾಗೂ 6 ಹಲ್ಲೆ ಮತ್ತು ದೊಂಬಿ ಪ್ರಕರಣ ದಾಖಲಾಗಿವೆ.


ಆರೋಪಿಗಳ ಬಂಧನಕ್ಕೆ ನೆರವಾದ ಬಾತ್ಮೀದಾರರಿಗೆ ಘೋಷಿಸಿದ್ದ ನಗದು ಬಹುಮಾನವನ್ನು ಪೊಲೀಸ್ ಇಲಾಖೆಯಿಂದ ವಿತರಿಸಲಾಗಿದೆ.


ಅಪರಾಧ ತಡೆ ಹಾಗೂ ಅಪರಾಧಿಗಳ ಪತ್ತೆ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದ್ದಾಗಿದ್ದು, ಮುಂದೆಯೂ ಇದೇ ರೀತಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.