ಲೋಕಬಂಧು ನ್ಯೂಸ್ ಕಾಪು, ಜೂ.8
ಪರಿಸರ ರಕ್ಷಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಎನ್ಆರ್.ಎಲ್ಎಮ್ ಜಿಲ್ಲಾ ವ್ಯವಸ್ಥಾಪಕಿ ಡಾ.ಸೌಮ್ಯಾ ಹೇಳಿದರು.ಕಾಪು ಮಹಿಳಾ ಕಿಸಾನ್ ಉತ್ಪಾದಕ ಕಂಪೆನಿ ಆಶ್ರಯದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿ.ಪಂ. ಉಡುಪಿ, ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪೆನಿ ಮತ್ತು ಅಡ್ವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಚಿಗುರು ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಅಡ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಣ್ಣಿನ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕುಡಿಯುವ ನೀರು, ಉಸಿರಾಡುವ ಗಾಳಿ ಪರಿಶುದ್ಧವಾಗಿರಬೇಕೆಂದರೆ ನಮ್ಮ ಸುತ್ತಲಿನ ಪರಿಸರ ಉಳಿಯಬೇಕು. ಗಿಡ ಮರಗಳು ಕೇವಲ ಮಾನವನಿಗೆ ಮಾತ್ರವಲ್ಲ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಅತೀ ಅಗತ್ಯ. ಆದ್ದರಿಂದ ಪರಿಸರವನ್ನು ಕಾಪಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.ಮಹಿಳಾ ಕಿಸಾನ್ ಕಂಪನಿ (ಎಂಕೆಪಿಸಿ ) ನಿರ್ದೇಶಕಿ ಗೀತಾ ವಾಗ್ಳೆ ಮಾತನಾಡಿ, ಇಂದು ಮಕ್ಕಳಲ್ಲಿ ಮೊಬೈಲ್ ಗೀಳು ಅತಿಯಾಗಿರುವುದರಿಂದ ಇತರ ಹವ್ಯಾಸಗಳು ಕಡಿಮೆಯಾಗುತ್ತಾ ಬಂದಿವೆ. ನಮ್ಮ ಬದುಕು ಆರೋಗ್ಯಯುತವಾಗಿ ಸಾಗಬೇಕಾದರೆ ನಮ್ಮ ಪರಿಸರವನ್ನು ನಾವು ಹಸಿರಾಗಿಸಬೇಕು. ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವ ಹಾಗೂ ಉಳಿಸುವ ಕೆಲಸ ನಮ್ಮಿಂದಾಗಬೇಕು. ಆದ್ದರಿಂದ ಮೊಬೈಲ್ ಬಿಡಿ-ಗಿಡ ನೆಡಿ-ಪಾಠದತ್ತ ಗಮನ ಕೊಡಿ ಎಂದು ಕಿವಿಮಾತು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಕವಿತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಂಪೆನಿಯ ಪರಿಸರ ಕಾಳಜಿಯನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂಕೆಪಿಸಿ ಅಧ್ಯಕ್ಷೆ ಉಷಾ ಎನ್., ಪ್ರಧಾನಿ ಆಶಯದ 'ಏಕ್ ಪೇಡ್ ಮಾ ಕೇ ನಾಮ್' ಯೋಜನೆ ಎಲ್ಲಾ ಕಡೆಗಳಲ್ಲೂ ಅನುಷ್ಠಾನಕ್ಕೆ ಬರುವಂತೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ಹಾಗೂ ಎಂಕೆಪಿಸಿ ನಿರ್ದೇಶಕಾದ ಪವಿತ್ರಾ ಗಿರೀಶ್, ಕವಿತಾ, ಕಸ್ತೂರಿ, ಮಮತಾ ವಾಗ್ಳೆ , ಕಂಪೆನಿಯ ಲೆಕ್ಕಾಧಿಕಾರಿವಸುಶ್ಮಿತಾ ಮೊದಲಾದವರಿದ್ದರು.
ಕಂಪೆನಿ ಕಾರ್ಯನಿರ್ವಾಹಣಾಧಿಕಾರಿ ರೀನಾ ಹೆಗ್ಡೆ ಸ್ವಾಗತಿಸಿ, ನಿರೂಪಿಸಿದರು.