ಲೋಕಬಂಧು ನ್ಯೂಸ್ | ಉಡುಪಿ, ಜೂ.11
ತೆಂಕನಿಡಿಯೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಕುಮ್ಮೆಕೆರೆ ಕಾಮಗಾರಿಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತೆಂಕನಿಡಿಯೂರು ಗ್ರಾಮದಲ್ಲಿ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಮ್ಮೆಕೆರೆಯನ್ನು ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗಿದ್ದು, ಕ್ಷೇತ್ರದ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಆ ಮೂಲಕ ಅಂತರ್ಜಲ ಪುನಶ್ಚೇತನಗೊಳಿಸಿ ಗ್ರಾಮದ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಸುರೇಶ್, ಕೃಷ್ಣ ಶೆಟ್ಟಿ, ಪ್ರಶಾಂತ ಸಾಲ್ಯಾನ್, ಪಕ್ಷದ ಪ್ರಮುಖರಾದ ಉಮೇಶ್ ಪೂಜಾರಿ ಬಡಾನಿಡಿಯೂರು, ಪ್ರಭಾಕರ ತಿಂಗಳಾಯ, ನಾಗರಾಜ ಕುಂದರ್ ಮೊದಲಾದವರಿದ್ದರು.
