ಕೊಲ್ಲೂರು ವಿಜಯ್ ಯಾತ್ರೆಗೆ ಬಿಗಿ ಪಹರೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.11
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂ.12ರಂದು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಬಿಗಿ ಪಹರೆ ಏರ್ಪಡಿಸಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12.30ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ಪೊಲೀಸ್ ನಿಯೋಜನೆ ಮಾಡಲಾಗುವುದು. ಸಿಎಂ ವಿಜಯ್ ಝಡ್+ ಭದ್ರತೆಗೊಳಪಡುವುದರಿಂದ ತಮಿಳುನಾಡು ಮತ್ತು ಕರ್ನಾಟಕದ ಡಿಐಜಿ ಮತ್ತು ಎಸ್.ಪಿ. ಅವರನ್ನೊಳಗೊಂಡಂತೆ ಸುಮಾರು 40 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬಂದಿಗಳನ್ನು ಪಹರೆಗೆ ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


ಸಿಎಂ ವಿಜಯ್ ಭೇಟಿ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಸಾರ್ವಜನಿಕರಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ. ಸಿಎಂ ವಿಜಯ್ ಅವರು ಕೊಲ್ಲೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು ಯಾವುದೇ ಸಭೆ, ಸಮಾರಂಭಗಳಲ್ಲಿ ಫಾಲ್ಗೊಳ್ಳುವುದಿಲ್ಲ. ದೇವರ ದರ್ಶನದ ತರುವಾಯ ರಸ್ತೆ ಮಾರ್ಗ ಮೂಲಕ ಮಂಗಳೂರಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ತಮಿಳುನಾಡಿಗೆ ಮರಳುವರು.


ಈಮಧ್ಯೆ, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಸಿಎಂ ವಿಜಯ್ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ತಿಳಿಸಿದ್ದಾರೆ.