ಜು.29- ಸೆ.26: ಭಂಡಾರಕೇರಿ ಶ್ರೀಗಳ ಚಾತುರ್ಮಾಸ್ಯ

ಲೋಕಬಂಧು ನ್ಯೂಸ್ ಉಡುಪಿ, ಜು.16
ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವ ಸುಸಂದರ್ಭದಲ್ಲಿ ಬಾರ್ಕೂರು ಸಮೀಪದ ಭಂಡಾರಕೇರಿ ಮೂಲಮಠದಲ್ಲಿ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಜುಲೈ 29ರಿಂದ ಸೆಪ್ಟೆಂಬರ್ 26ರ ವರೆಗೆ ತಮ್ಮ 47ನೇ ಚಾತುರ್ಮಸಸ್ಯ ವ್ರತ ಕೈಗೊಳ್ಳುವುದಾಗಿ ತಿಳಿಸಿದರು.ಇಲ್ಲಿನ ರಥಬೀದಿಯ ಭಂಡಾರಕೇರಿ ಶಾಖಾಮಠದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶ್ರೀಪಾದರು, ಈ ಅವಧಿಯಲ್ಲಿ ಶತಮಾನೋತ್ಸವ ಅಂಗವಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರತಿದಿನ 48‌ ಮಂದಿ ವಿದ್ವಾಂಸರಿಂದ ಚತುರ್ವೇದ ಪಾರಾಯಣ, 36 ವಿದ್ವಾಂಸರಿಂದ ಮಧ್ವಭಾರತದ 108 ಪಾರಾಯಣ ಹಾಗೂ 16 ಮಂದಿ ವಿದ್ವಾಂಸರಿಂದ ಸಮಗ್ರ ಶ್ರೀಮದ್ಭಾಗವತ ಪಾರಾಯಣ ನಡೆಯಲಿದೆ. ಜೊತೆಗೆ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿದ್ವಾಂಸರಿಂದ ರಾಮಾಯಣ- ಮಹಾಭಾರತ ಕುರಿತು ಪ್ರವಚನ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ, ಹರಿಕಥೆ, ತಾಳಮದ್ದಳೆ, ದಾಸವಾಣಿ, ಸಂಗೀತ, ಗಮಕ ವಾಚನ ಇತ್ಯಾದಿ ಆಯೋಜಿಸಲಾಗುವುದು.


ಸೆ.12ರಿಂದ 26ರ ವರೆಗೆ 15 ಮಂದಿ ವಿದ್ವಾಂಸರಿಂದ ಪೋಷ್ಠಪದಿ ಭಾಗವತ ಪ್ರವಚನ ನಡೆಯಲಿದೆ.

ಶತಕಂಠ ಗಾಯನ
ಇದೇ ಸಂದರ್ಭದಲ್ಲಿ ಶ್ರೀವಿದ್ಯೇಶವಿಠಲಾಂಕಿತದ ಹಾಡುಗಳ ಶತಕಂಠ ಗಾಯನ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.


100 ವಿದ್ವಾಂಸರಿಗೆ ಸನ್ಮಾನ
ಚಾತುರ್ಮಾಸದ ಅವಧಿಯಲ್ಲಿ ಒಟ್ಟು 100 ಮಂದಿ ವಿದ್ವಾಂಸರಿಗೆ ಮಾಧ್ವರಾದ್ಧಾಂತಸಂವರ್ಧಕ ಸಭಾ ವತಿಯಿಂದ ಪ್ರಶಸ್ತಿ ಸಹಿತ ಸನ್ಮಾನ ನಡೆಸಲಾಗುವುದು ಎಂದು ಶ್ರೀಪಾದರು ತಿಳಿಸಿದರು.


ಉಡುಪಿ ರಥಬೀದಿಯ ಭಂಡಾರಕೇರಿ ಮಠದಲ್ಲಿ ಕಳೆದ ವರ್ಷ ನಡೆಸಿದ ಚಾತುರ್ಮಾಸ ಸಂದರ್ಭದಲ್ಲಿ ನಡೆಸಿದ 'ಮನೆ ಮನೆ ಭಾಗವತ' ಕಾರ್ಯಕ್ರಮದಂಗವಾಗಿ ಹೊರತರಲಾದ `ಭಾಗವತ ಬಿಂದುಸರ' ಹೊತ್ತಗೆ ಅನಾವರಣಗೊಳ್ಳಲಿದೆ ಎಂದು ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಿಳಿಸಿದರು.


ಚಾತುರ್ಮಾಸ ಸಮಿತಿ ಸದಸ್ಯರಾದ ಯು.ಬಿ.ಶ್ರೀನಿವಾಸ್, ವಿಷ್ಣು ಪಾಡಿಗಾರ್, ನಾಗರಾಜ ಕೆದ್ಲಾಯ, ರಾಜೇಶ ಉಪಾಧ್ಯ ಹಾಗೂ ಬೈಲೂರು ಜಯರಾಮ ಆಚಾರ್ಯ ಇದ್ದರು.