ಮದ್ಯ ವ್ಯಸನ ಗುಣಪಡಿಸಬಹುದಾದ ಕಾಯಿಲೆ

ಲೋಕಬಂಧು ನ್ಯೂಸ್ | ಮೂಡುಬಿದಿರೆ, ಜು.4
ಮದ್ಯ ವ್ಯಸನಕ್ಕೆ ಒಳಗಾದವರನ್ನು ಅಪರಾಧಿಗಳಂತೆ ಅಥವಾ ಕಳಂಕದ ಪ್ರತೀಕವಾಗಿ ಕಾಣುವುದು ತಪ್ಪು. ಮದ್ಯ‌ ವ್ಯಸನ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆ. ಮದ್ಯ ವ್ಯಸನಿಗಳನ್ನು ದೂರ ತಳ್ಳುವುದಕ್ಕಿಂತ ಅವರಲ್ಲಿ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯುವುದು ಸಮಾಜದ ಜವಾಬ್ದಾರಿ ಎಂದು ಮಂಗಳೂರಿನ ಪ್ರಜ್ಞಾ ಕೌನ್ಸಲಿಂಗ್ ಸೆಂಟರ್‌ನ ಸಂಸ್ಥಾಪಕಿ ಡಾ.ಹಿಲ್ಡಾ ರಾಯಪ್ಪನ್ ಅಭಿಪ್ರಾಯ‌ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಮದ್ಯ ವ್ಯಸನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಾಗೂ ಅವರಿಗೆ ಗೌರವಯುತ, ಆರೋಗ್ಯಕರ ಮತ್ತು ಸ್ವಾವಲಂಬಿ ಬದುಕನ್ನು ಮರಳಿ ಕಲ್ಪಿಸುವ ಆಶಯದಿಂದ ಆಳ್ವಾಸ್ ಪುನರ್ಜನ್ಮ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಮಹಿಳಾ ಮದ್ಯ ವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗಾಗಿ ಪ್ರತ್ಯೇಕ ಮದ್ಯ ವರ್ಜನ ಶಿಬಿರ ಆಯೋಜಿಸಿರುವ ಆಳ್ವಾಸ್ ಪುನರ್ಜನ್ಮದ ಕಾರ್ಯವನ್ನು ಶ್ಲಾಘಿಸಿದ ಅವರು, ಇದು ಹಣ ಸಂಪಾದನೆಗಾಗಿ ನಡೆಸುವ ಕಾರ್ಯಕ್ರಮವಲ್ಲ; ಸಮಾಜದ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆ ಎಂದರು.
ಸಮಾಜದಲ್ಲಿ ಪುರುಷರ ಮದ್ಯಪಾನವನ್ನು ಸಹಜ ಎಂಬಂತೆ ಒಪ್ಪಿಕೊಳ್ಳುವ ಮನೋಭಾವವಿದೆ. ಆದರೆ, ಮಹಿಳೆ ಮದ್ಯ ವ್ಯಸನಕ್ಕೊಳಗಾದರೆ ಆಕೆಯನ್ನು ಕೀಳಾಗಿ ನೋಡುವ ಮನೋಭಾವ ಇನ್ನೂ ಇದೆ. ಗಂಡಸು ಕುಡಿಯುವುದು ಗಿಡದ ಕೊಂಬೆಗೆ ಬೆಂಕಿ ಬಿದ್ದಂತೆ; ಹೆಣ್ಣು ಕುಡಿಯುವುದು ಮರದ ಬೇರಿಗೆ ಬೆಂಕಿ ಕೊಟ್ಟಂತೆ. ಕಾರಣ ಮಹಿಳೆಯೇ ಕುಟುಂಬದ ಅಡಿಪಾಯ. ಆಕೆಯ ವ್ಯಸನ ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿರದೆ ಇಡೀ ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಹಾಗೂ ಸಮಾಜದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ ಎಂದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೌಟುಂಬಿಕ ಸಮಸ್ಯೆ, ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ, ಸಾಮಾಜಿಕ ಪರಿಸ್ಥಿತಿ ಇತ್ಯಾದಿಗಳಿಂದ ಕೆಲವು ಮಹಿಳೆಯರು ಮದ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವ ಇಂಥ ಪುನರ್ವಸತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ಸಮಾಜಮುಖಿ ಚಿಂತನೆ  ಅಭಿನಂದನೀಯ ಎಂದರು.


ಬೆಳ್ತಂಗಡಿ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಮಾತನಾಡಿ, ಮಹಿಳೆಯರ ಘನತೆ ಮತ್ತು ಗೌರವಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಶಿಬಿರದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಈ ಮದ್ಯ ವರ್ಜನ ಶಿಬಿರದ ಮೂಲಕ ವ್ಯಸನಿಗಳ ಬದುಕಿನಲ್ಲಿ ಪರಿವರ್ತನೆಯಾಗಿ ಅವರ ಕುಟುಂಬಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಆಶಾಭಾವನೆ ಮರುಸ್ಥಾಪನೆಯಾಗಲಿ ಎಂದು ಆಶಿಸಿದರು.
ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ, ಉದ್ಯಮಿ ಕೆ. ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ಮೂಡುಬಿದಿರೆ ಜನಜಾಗೃತಿ ವೇದಿಕೆ ಅಧ್ಯಕ್ಷ ವಾಸುದೇವ ನಾಯ್ಕ ಇದ್ದರು.


ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕಿ ಸುಮನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಎಸ್‌ಕೆಆರ್‌ಡಿಪಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸ್ವಾಗತಿಸಿ, ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ವಂದಿಸಿದರು.