ಮಾಜಿ ಸಚಿವ ರಾಮಚಂದ್ರೇಗೌಡ ‌ನಿಧನ

ಲೋಕಬಂಧು ನ್ಯೂಸ್ | ಬೆಂಗಳೂರು, ಜು.14
ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ರಾಮಚಂದ್ರೇಗೌಡ (88) ಮಂಗಳವಾರ ಮುಂಜಾನೆ ನಿಧನರಾದರು.
ವಯೋಸಹಜ ಕಾಯಿಲೆ ಮತ್ತು ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಅವರು ನಗರದ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.


ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾಯಕರಲ್ಲಿ ರಾಮಚಂದ್ರೇಗೌಡ ಪ್ರಮುಖರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷದ ಸಂಘಟನೆ ಬಲಪಡಿಸಲು ಅವರು ಅವಿರತವಾಗಿ ದುಡಿದಿದ್ದರು. ಪಕ್ಷದ ಆರಂಭಿಕ ದಿನಗಳಿಂದಲೇ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಕಾರ್ಯಕರ್ತರ ನಡುವೆ ಸರಳತೆ ಮತ್ತು ಸಂಘಟನಾ ಕೌಶಲ್ಯದಿಂದ ವಿಶಿಷ್ಟ ಸ್ಥಾನ ಗಳಿಸಿದ್ದರು.


ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಪಕ್ಕಾ ಕಾರ್ಯಕರ್ತನಾಗಿದ್ದ ರಾಮಚಂದ್ರೇಗೌಡ 1953ರಲ್ಲಿ ಸಂಘವನ್ನು ಸೇರಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. ಬಳಿಕ 1970ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದರು.


ರಾಜ್ಯ ರಾಜಕಾರಣದಲ್ಲಿ ಮೇಲ್ಮನೆಯ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಅವರು ಸತತ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ದರು. ಆಡಳಿತಾತ್ಮಕ ಅನುಭವ ಮತ್ತು ರಾಜಕೀಯ ಪಕ್ವತೆಯಿಂದ ಅವರು ರಾಜ್ಯ ರಾಜಕೀಯದಲ್ಲಿ ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು.


ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು, ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದರು.


2010ರಲ್ಲಿ ವೈದ್ಯಕೀಯ ಕಾಲೇಜುಗಳ ನೇಮಕಾತಿ ಹಗರಣದಲ್ಲಿ ಅವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸುದೀರ್ಘ ಕಾನೂನು ಹೋರಾಟ ನಡೆಸಿದ ಅವರು, ಹೈಕೋರ್ಟ್‌ನಿಂದ ಸಂಪೂರ್ಣ ದೋಷಮುಕ್ತರಾಗಿ ಕ್ಲೀನ್ ಚಿಟ್ ಪಡೆದಿದ್ದರು.


ಸರಳತೆ, ಪ್ರಾಮಾಣಿಕತೆ ಮತ್ತು ಸಂಘಟನಾ ಸಾಮರ್ಥ್ಯದಿಂದ ಪಕ್ಷ ಕಾರ್ಯಕರ್ತರ ಮನ ಗೆದ್ದಿದ್ದ ರಾಮಚಂದ್ರೇಗೌಡ ನಿಧನ ಕರ್ನಾಟಕ ರಾಜಕೀಯಕ್ಕೆ ಅಪಾರ ನಷ್ಟವಾಗಿದೆ.