ಭಾಷೆ ಬಳಕೆ ಬಗ್ಗೆ ಎಚ್ಚರಿಕೆ ಅಗತ್ಯ

ಲೋಕಬಂಧು ನ್ಯೂಸ್ | ಉಡುಪಿ, ಜು.30
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ, ಪ್ರತಿಭಟನೆಯ ವೇಳೆ ಶಾಸಕ ಯಶಪಾಲ್ ಸುವರ್ಣ ಬಳಸಿದ ಮಾತುಗಳು ಅವರ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ಜನಪ್ರತಿನಿಧಿಗಳು ಬಳಸುವ ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಕೆ ಮಾಡುವ ಭರದಲ್ಲಿ ಮಾತಿನ ಮೇಲೆ ನಿಗಾ ಇರಬೇಕು. ಸಿದ್ಧಾಂತಗಳ ವಿಚಾರದಲ್ಲಿ ಹೋರಾಟ ನಡೆಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ, ಯಾವುದೇ ನಾಯಕನ ಕುರಿತು ಮಾತನಾಡುವಾಗ ಜನಪ್ರತಿನಿಧಿಗಳು ಭಾಷೆಯ ಮೇಲೆ ಹಿಡಿತ ಹೊಂದಿ, ಗೌರವಯುತವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ವಿಷಯಾಧಾರಿತ ಚರ್ಚೆ ನಡೆಯಬೇಕು. ವೈಯಕ್ತಿಕ ನಿಂದನೆ ಅಥವಾ ಅವಹೇಳನಾತ್ಮಕ ಹೇಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದವರು ಹೇಳಿದರು.


ಶಾಸಕ ಯಶಪಾಲ್ ಸುವರ್ಣ ಅವರು ತಾವು ಆಡಿದ ಮಾತುಗಳ ಬಗ್ಗೆ ಮರುಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ ಹೆಗ್ಡೆ, ಮತದಾರರು ಕೂಡಾ ಇಂಥ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಜನಪ್ರತಿನಿಧಿಗಳ ನಡೆ-ನುಡಿಯನ್ನು ಮೌಲ್ಯಮಾಪನ ಮಾಡಬೇಕು ಎಂದರು.


ಶಾಸಕರನ್ನು ಬಂಧಿಸಿ
ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಗಲಭೆಗೆ ಪ್ರಚೋದನೆ ನೀಡುವಂಥ ಹೇಳಿಕೆ ನೀಡಿರುವ ಶಾಸಕ ಯಶಪಾಲ್ ಸುವರ್ಣ ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.


ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗುವ ಹೇಳಿಕೆಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಜನಪ್ರತಿನಿಧಿಯಾದವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಬೇಕಾದ ಹೊಣೆಗಾರಿಕೆ ಹೊಂದಿರುತ್ತಾರೆ. ಆದರೆ, ಶಾಸಕ ಯಶಪಾಲ್ ಸುವರ್ಣ ಅವರು ಜನರ ನಡುವೆ ಘರ್ಷಣೆ ಉಂಟುಮಾಡುವ ರೀತಿಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಚನ್ ಆರೋಪಿಸಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್,ಪಕ್ಷ ಪ್ರಮುಖರಾದ ಅಲೆವೂರು ಹರೀಶ ಕಿಣಿ, ಪ್ರಶಾಂತ ಜತ್ತನ್ನ ಇದ್ದರು.