ಲೋಕಬಂಧು ನ್ಯೂಸ್ ಬ್ರಹ್ಮಾವರ, ಜು.28
ಶ್ರಾವಣದಿಂದ ಕಾರ್ತೀಕ ಮಾಸ ವರೆಗಿನ ನಾಲ್ಕು ತಿಂಗಳ ಕಾಲ ಭಗವಂತ ಯೋಗ ನಿದ್ದೆಯಲ್ಲಿದ್ದು ಈ ನಾಲ್ಕು ತಿಂಗಳ ಕಾಲ ಭಗವಂತನಿಗೆ ಅತ್ಯಂತ ಪ್ರಿಯವಾದ ಮಾಸಗಳಾಗಿದ್ದು, ಭಗವಂತ ಯೋಗ ನಿದ್ರೆಯಲ್ಲಿರುವ ಪುಣ್ಯಕಾಲ ಧರ್ಮಾಚರಣೆಗೆ ಪ್ರಶಸ್ತ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.ಬಾರಕೂರು ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ 47ನೇ ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪುರಪ್ರವೇಶ ಮತ್ತು ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಚಾತುರ್ಮಾಸದಲ್ಲಿ ಭಾಗವತ ಶ್ರವಣ, ಭಜನೆ, ದಾನ, ವ್ರತ, ಯಜ್ಞ ಇತ್ಯಾದಿ ಅನಂತ ಪುಣ್ಯ ಫಲಪ್ರದವಾಗಿದ್ದು, ಸರ್ವರೂ ಭಗವಂತನ ಸ್ಮರಣೆ ಮಾಡಿದಾಗ ಮಳೆ ಬೆಳೆಯೊಂದಿಗೆ ಲೋಕ ಸುಭಿಕ್ಷವಾಗಲಿದೆ.ಚಾತುರ್ಮಾಸದ ಈ ನಾಲ್ಕು ತಿಂಗಳಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಇತ್ಯಾದಿಗಳಿಗೆ ಸೂಕ್ತವಲ್ಲ. ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಂಚಾರ ಮಾಡದೇ ಒಂದೆಡೆ ಕುಳಿತು ಪಾರಮಾರ್ಥಿಕ ಚಿಂತನೆ, ಅಧ್ಯಯನ ಮತ್ತು ಅನುಷ್ಠಾನದಲ್ಲಿ ನಿರತರಾಗಿರುತ್ತಾರೆ ಎಂದರು.ಬಾರಕೂರು ಭಂಡಾರಕೇರಿ ಮಠದಲ್ಲಿ ಈ ಬಾರಿ ನಡೆಯುವ ಚಾತುರ್ಮಾಸ್ಯದಲ್ಲಿ ಪ್ರತಿದಿನ ಸಂಜೆ ಪ್ರವಚನ, ಭಾಗವತ ಶ್ರವಣ ಇತ್ಯಾದಿ ನಡೆಯಲಿದ್ದು ಭಕ್ತಾದಿಗಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಈ ಸಂದರ್ಭದಲ್ಲ ಭಾಗವತ ಬಿಂದುಸರ ಕೃತಿಯನ್ನು ಶ್ರೀಗಳು ಅನಾವರಣಗೊಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಶ್ರೀಗಳ ಚಾತುರ್ಮಾಸ್ಯದ ಕಾರ್ಯಕ್ರಮಗಳಿಂದ ಊರಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಶ್ರೀಗಳ ಪುರಪ್ರವೇಶ ಸಮಿತಿ ಗೌರವಾಧ್ಯಕ್ಷ ಹಾಗೂ ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ಕೆ. ಶ್ರೀರಮಣ ಉಪಾಧ್ಯಾಯ ಮಾತನಾಡಿ, ಚಾತುರ್ಮಾಸ್ಯದ ಅವಧಿಯಲ್ಲಿ ಯತಿಗಳು ನಡೆಸವ ಪಾರಮಾರ್ಥಿಕ ಚಿಂತನೆಯಿಂದ ಶಿಷ್ಯರಿಗೆ ಶ್ರೇಯಸ್ಸಾಗುತ್ತದೆ ಎಂದರು.
ಶ್ರೀ ಪಂಚಲೀಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಯುವ ಪೀಳಿಗೆಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವು ದೊರೆಯಬೇಕಾದಲ್ಲಿ ಇಂಥ ಕಾರ್ಯಕ್ರಮಗಳಲ್ಲಿ ಯುವ ಜನತೆ ಭಾಗವಹಿಸಬೇಕು ಎಂದರು.
ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದೊಂದಿಗೆ ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಸರ್ವರೂ ಕೈಜೋಡಿಸಬೇಕು ಎಂದವರು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಮಂಜುನಾಥ ರಾವ್, ಶ್ರೀ ಪಟ್ಟಾಭಿರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಪೈ, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕರ್ಣಾಟಕ ಬ್ಯಾಂಕ್ ಎಜಿಎಮ್ ರಮೇಶ್ ವೈದ್ಯ ವೇದಿಕೆಯಲ್ಲಿದ್ದರು.
ಬಾರಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ವಿಜಯ ಕಡೆಕಾರ್ ಪ್ರಾರ್ಥಿಸಿದರು. ಡಾ.ಶ್ರೀನಿಧಿ ವಸಿಷ್ಠ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೆಂಕಟರಮಣ ಭಂಡಾರ್ಕರ್ ವಂದಿಸಿದರು. ಜಯರಾಮ ಆಚಾರ್ಯ ನಿರೂಪಿಸಿದರು.
ಸಮಿತಿ ಪದಾಧಿಕಾರಿಗಳಾದ ಯು.ಬಿ.ಶ್ರೀನಿವಾಸ್, ವಿಷ್ಣುಪ್ರಸಾದ್ ಪಾಡಿಗಾರ್, ನಾಗರಾಜ ಕೆದ್ಲಾಯ, ರಾಜೇಶ್ ಉಪಾಧ್ಯ, ಚಂದ್ರಶೇಖರ ಹಾಗೂ ಪುರಪ್ರವೇಶ ಸಮಿತಿ ಕಾರ್ಯದರ್ಶಿ ಪ್ರಶಾಂತ ಅಡಿಗ ಸಹಕರಿಸಿದರು.