ಜು.31-ಆ.2: ಸ್ವದೇಶಿ ಖಾದ್ಯಮೇಳ

ಲೋಕಬಂಧು ನ್ಯೂಸ್ ಉಡುಪಿ, ಜು.27
'ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ- ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ' ಎಂಬ ಆಶಯದೊಂದಿಗೆ ಜುಲೈ 31ರಿಂದ ಆಗಸ್ಟ್ 2ರ ವರೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸ್ವದೇಶಿ ಖಾದ್ಯ ಮೇಳ ಆಯೋಜಿಸಲಾಗಿದೆ ಎಂದು ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಹಾಗೂ ಅನೇಕ ದೈವ- ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿ ಮತ್ತು ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಮೇಳದಲ್ಲಿ ಏನಿರಲಿದೆ?
ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯ ವರೆಗೆ ನಡೆಯಲಿರುವ ಈ ಖಾದ್ಯ ಮೇಳದಲ್ಲಿ ಸ್ವದೇಶಿ ತಿಂಡಿ- ತಿನಿಸುಗಳು, ತುಳುನಾಡಿನ ವಿಶೇಷ ತಿನಿಸುಗಳು, 

ವಿವಿಧ ನಮೂನೆಯ ದೋಸೆ, ಹಲಸಿನ ಹಣ್ಣಿನಿಂದ ತಯಾರಿಸುವ ವಿವಿಧ ಖಾದ್ಯಗಳು, ಮಳೆಗಾಲದ ವಿಶೇಷ ತಿನಿಸಿಗಳು, ಸ್ಥಳದಲ್ಲೇ ತಯಾರಿಸಿ‌ ಕೊಡುವ ವಿವಿಧ ಲೈವ್ ಫುಡ್ ಗಳು, ಸಾವಯವ ವಸ್ತುಗಳು,  ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಇತರ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.


ಕಾರ್ಯಕ್ರಮದ ಉದ್ದೇಶ? 
ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳೀಯ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ವ್ಯಾಪಾರ ವಿಸ್ತರಿಸಿಕೊಳ್ಳಲು ಉತ್ತಮ ವೇದಿಕೆ ಇದೆ. ಆ ಮೂಲಕ ಸ್ಥಳೀಯ ರೈತರಿಗೆ ಪ್ರೋತ್ಸಾಹ, ಸಾವಯವ ವಸ್ತುಗಳ ಸದ್ಬಳಕೆ ಹೆಚ್ಚಿಸಲು, ಮತ್ತು ಆರೋಗ್ಯಕರ ಸ್ವದೇಶಿ ಆಹಾರ ವಸ್ತುಗಳು ಹಾಗೆಯೇ ಸಾವಯವ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಚುರಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.