ಲೋಕಬಂಧು ನ್ಯೂಸ್ | ಮಣಿಪಾಲ, ಜು.31
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಗುರುವಾರ ಲಿಖಿತ ದೂರು ಸಲ್ಲಿಸಲಾಗಿದೆ.
ಜುಲೈ 28ರಂದು ಶಾಸಕ ಯಶ್‌ಪಾಲ್ ಸುವರ್ಣ ಅವರು ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಅಸಾಂವಿಧಾನಿಕ ಹೇಳಿಕೆಗಳನ್ನು ನೀಡಿದ್ದು, ಸಾರ್ವಜನಿಕರಲ್ಲಿ ದ್ವೇಷ ಮತ್ತು ಅಶಾಂತಿ ಉಂಟುಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಾಸಕ ಯಶಪಾಲ್ ಅವರ ಆ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ನಿಟ್ಟೆ ದಿನಕರ್ ಶೆಟ್ಟಿ, ಉಡುಪಿ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.
