ಲೋಕಬಂಧು ನ್ಯೂಸ್ ಉಡುಪಿ, ಜು.16
ರಾಜ್ಯದ ಕಾಂಗ್ರೆಸ್ ಸರ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣದ ಹೆಸರಿನಲ್ಲಿ ಕೇವಲ ರಾಜಕೀಯ ಮಾಡುತ್ತಿದ್ದು, ಒಬಿಸಿ ಸಮುದಾಯಕ್ಕೆ ಸರಣಿ ಅನ್ಯಾಯ ಎಸಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೇಶವ ಪ್ರಸಾದ್ ವಾಗ್ದಾಳಿ ನಡೆಸಿದರು.ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ದ್ವಂದ್ವ ನಿಲುವು ಹಾಗೂ ಒಬಿಸಿ ವಿರೋಧಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿಯಲು ಕಾಂತರಾಜ್ ಅವರ ನೇತೃತ್ವದಲ್ಲಿ ವರದಿ ಸಿದ್ಧಪಡಿಸಲಾಗಿತ್ತು. ಆದರೆ, ಕೋಟಿಗಟ್ಟಳೆ ರೂ. ವೆಚ್ಚ ಮಾಡಿ ಸಿದ್ಧಪಡಿಸಿದ ಆ ವರದಿಯನ್ನು ಅಂದು ಕಾಂಗ್ರೆಸ್ ಸರ್ಕಾರ ಏಕೆ ಸ್ವೀಕರಿಸಲಿಲ್ಲ ಎಂಬುದಕ್ಕೆ ಮೊದಲು ಉತ್ತರಿಸಬೇಕು. ಅದರಿಂದಾಗಿ ಸಾರ್ವಜನಿಕರ ಬರೋಬ್ಬರಿ 165 ಕೋಟಿ ರೂ. ಹಣ ನಷ್ಟವಾಯಿತು ಎಂದು ಆರೋಪಿಸಿದರು.
ಅದಾದ ಬಳಿಕ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಮತ್ತೊಂದು ಆಯೋಗ ರಚಿಸಿ, ಅವರೂ ವರದಿಯನ್ನು ಸಲ್ಲಿಸಿದರು. ಆ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡರು. ಆದರೆ, ವರದಿ ಜಾರಿಗೆ ತರಲು ಯೋಚಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಇದು ಇಡೀ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಮಾಡಿದ ಘೋರ ಅವಮಾನ ಎಂದರು.
ಪ್ರಸ್ತುತ ಅಧ್ಯಕ್ಷರಾಗಿರುವ ಮಧುಸೂದನ ನಾಯಕ್ ನೀಡಿರುವ ಆರ್ಥಿಕ ಹಾಗೂ ಸಾಮಾಜಿಕ ವರದಿಯನ್ನು ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಾರಿಗೆ ತರುತ್ತಾರಾ ಎಂದು ಕೇಶವ ಪ್ರಸಾದ್ ಪ್ರಶ್ನಿಸಿದರು.
ನೆರೆಯ ರಾಜ್ಯಗಳಾದ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಹಾಗೂ ಆಂಧ್ರಪ್ರದೇಶದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅಧಿಕಾರಕ್ಕೆ ಬಂದ ಕೇವಲ ಒಂದೇ ವರ್ಷದಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಅಂಥ ಇಚ್ಛಾಶಕ್ತಿ ಕರ್ನಾಟಕದಲ್ಲಿ ಯಾಕಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಧುಸೂದನ ನಾಯಕ್ ವರದಿ ಜಾರಿಯಾದರೆ ಅದರ ಕುರಿತು ವಿಶೇಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೇಶವ ಪ್ರಸಾದ್, ಬಿಜೆಪಿ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ಅವರು ಅದನ್ನು ವೈಜ್ಞಾನಿಕ ಸಮೀಕ್ಷೆ ಎನ್ನುವ ಬದಲಾಗಿ ಕೇವಲ ರಾಜಕೀಯ ಲಾಭಕ್ಕಾಗಿ 'ಜಾತಿ ಜನಗಣತಿ' ಎಂದು ಬಿಂಬಿಸುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಆ ವರದಿಯ ಕುರಿತು ಬಿಜೆಪಿ ತನ್ನ ಅಂತಿಮ ನಿಲುವು ತೆಗೆದುಕೊಳ್ಳಬೇಕಾದರೆ ಮೊದಲು ವರದಿಯನ್ನು ಸದನದಲ್ಲಿ ಮುಕ್ತವಾಗಿ ಮಂಡಿಸಿ ಸುದೀರ್ಘ ಚರ್ಚೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಲಡಾಖ್ ಪ್ರಾಂತ್ಯದ ಹೋರಾಟಗಾರ ಸೋನಮ್ ವಾಂಗ್ ಚುಕ್ ನಡೆಸುತ್ತಿರುವ ಪ್ರತಿಭಟನೆಯ ಹಿಂದೆ 'ಜಿರಳೆ ಪಕ್ಷ' (ವಿರೋಧ ಪಕ್ಷ)ಗಳ ಪಿತೂರಿ ಅಡಗಿದೆ ಎಂದು ಆರೋಪಿಸಿದ ಕೇಶವ ಪ್ರಸಾದ್, ಈ ಪಕ್ಷಗಳು ವಾಂಗ್ ಚುಕ್ ಅವರ ತಲೆಕೆಡಿಸಿ, ಅವರ ಹೋರಾಟವನ್ನು 'ಆಝಾದಿ', 'ಕಾಶ್ಮೀರ'ದಂಥ ದೇಶ ವಿರೋಧಿ ಘೋಷಣೆಗಳ ಹಾದಿಗೆ ತಿರುಗಿಸಲು ಯತ್ನಿಸುತ್ತಿವೆ. ವಾಂಗ್ ಚುಕ್ ಇಂಥ ಪೂರ್ವಾಗ್ರಹ ಪೀಡಿತ ಪ್ರೇರೇಪಣೆಗಳಿಂದ ತಕ್ಷಣ ಹೊರಬಂದು, ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಮಾಧ್ಯಮ ಪ್ರಮುಖ್ ಶಶಾಂಕ ಶಿವಾತ್ತಾಯ, ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಇದ್ದರು.