ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಪ್ರಹಸನ

ಲೋಕಬಂಧು ನ್ಯೂಸ್ | ಉಡುಪಿ, ಜು.30
ದೆಹಲಿ ಪ್ರತಿಭಟನೆಯ ದಾರಿ ತಪ್ಪಿಸಿ ದಾಂಧಲೆ ನಡೆಸಿದ್ದ ಕೆಲವು ದೇಶ ವಿರೋಧಿ ವಿಚ್ಛಿದ್ರಕಾರಿ ದುಷ್ಟ ಶಕ್ತಿಗಳನ್ನು ಸಾಕ್ಷಿ ಸಮೇತ ಪತ್ತೆಹಚ್ಚಿ ಬಂಧಿಸುವ ಸತ್ಕಾರ್ಯ ಕೇಂದ್ರ ಗೃಹ ಇಲಾಖೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಯತ್ನದ ಸಹಿತ ವಿದೇಶ ಪ್ರವಾಸದಲ್ಲಿರುವಾಗ ಸದಾ ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆ ಹಾಗೂ ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಕಾಂಗ್ರೆಸ್ ನಾಯಕರು ಪ್ರಹಸನ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಸಮಸ್ತ ದೇಶಭಕ್ತ ಜನತೆ ರಾಷ್ಟ್ರೀಯವಾದಿ ನಾಯಕ ಶಾಸಕ ಯಶಪಾಲ್ ಸುವರ್ಣ ಅವರ ಜೊತೆಗಿದ್ದಾರೆ. ಕಾಂಗ್ರೆಸ್‌ನ ಯಾವುದೇ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಕುತ್ಯಾರು ಸ್ಪಷ್ಟಪಡಿಸಿದ್ದಾರೆ.


ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆ ಕೂಗಿದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ನಡೆಸದ ಪೊಲೀಸ್ ಇಲಾಖೆ, ವಿಷಯನಿಷ್ಠ ಮಾತುಗಳನ್ನಾಡಿದ ಶಾಸಕ ಯಶಪಾಲ್ ಸುವರ್ಣ ಅವರ ಮೇಲೆ ಮಾತ್ರ ಎಫ್ಐಆರ್ ದಾಖಲಿಸಿರುವುದು ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ.


ಉಡುಪಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಸೇರಿದ ಜನಸ್ತೋಮ, ಜನ ಬೆಂಬಲವನ್ನು ಕಂಡು ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ರಾತೋರಾತ್ರಿ ಪೋಲಿಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವುದು ಅವರ ಹತಾಶ ಮನೋಭಾವಕ್ಕೆ ಸಾಕ್ಷಿ ಎಂದು ಕುತ್ಯಾರು ತಿಳಿಸಿದ್ದಾರೆ.


ನೀಟ್ ಮರು ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಪಾರದರ್ಶಕತೆಗಾಗಿ ಶಿಕ್ಷಣ ನೀತಿಗಳಲ್ಲಿ ತಿದ್ದುಪಡಿ ತರುತ್ತಿದ್ದು ಮುಂದೆ ಆನ್‌ಲೈನ್ ಪರೀಕ್ಷೆ, ಆನ್‍ಲೈನ್ ನೀಟ್ ಕೌನ್ಸಿಲಿಂಗ್ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ.


ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಪರೀಕ್ಷಾ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸರಕಾರ ಏನು ಕ್ರಮ ಕೈಗೊಂಡಿದೆ, ಎಷ್ಟು ಮಂದಿ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೆಸ್ ಜನತೆಯ ಮುಂದಿಡಬೇಕಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.