ಕೆಸರು ಗದ್ಡೆಯಲ್ಲಿ ಹೆಜ್ಜೆಹಾಕಿದ ಡಿಸಿ!

ಲೋಕಬಂಧು ನ್ಯೂಸ್ | ಮಣಿಪಾಲ, ಜು.6
ನಿತ್ಯವೂ ವಿವಿಧ ಸಭೆಗಳು, ಕಾರ್ಯಕ್ರಮಗಳು, ಆಡಳಿತಾತ್ಮಕ ಕಾರ್ಯಗಳಲ್ಲಿ ಬಿಜಿ಼ಯಾಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ರವಿವಾರದ ರಜಾದಿನವನ್ನು ಭತ್ತದ ಗದ್ದೆಯಲ್ಲಿ ಕಳೆದ ಬಲೇ ಕೆಸರ್ಡ್ ಗೊಬ್ಬುಗ (ಬನ್ನಿ ಕೆಸರಿನಲ್ಲಿ ಆಡುವ) ಗ್ರಾಮೀಣ ಕ್ರೀಡೆಯಲ್ಲಿ ಮಣ್ಣಿನ ಮಕ್ಕಳೊಂದಿಗೆ ಬೆರೆತು ಕೆಸರು ಗದ್ದೆಯಲ್ಲಿ ಹೆಜ್ಜೆಹಾಕಿ ರೈತಾಪಿ ವರ್ಗದ ಸಂತಸದೊಂದಿಗೆ ತಾವೂ ಖುಷಿಪಟ್ಟರು!
ಪರ್ಕಳದ ಪರೀಕ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಆಶ್ರಯದಲ್ಲಿ ಪರೀಕ ಮಣ್ಣಿನ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ಆಯೋಜಿಸಲಾಗಿದ್ದ 'ಬಲೇ ಕೆಸರ್'ಡ್ ಗೊಬ್ಬುಗ' ವಿನೂತನ ಗ್ರಾಮೀಣ ಕ್ರೀಡಾಕೂಟದಲ್ಲಿ ಗ್ರಾಮದ ನೂರಾರು ಮಂದಿ ಕೆಸರಿನ ಮೈದಾನದಲ್ಲಿ ನಡೆದ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಾರ್ವಜನಿಕರಿಗಾಗಿ 'ನಿಧಿ ಶೋಧನೆ' ಎಂಬ ವಿನೂತನ ಸ್ಪರ್ಧೆಯೂ ಗಮನ ಸೆಳೆಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕುಟುಂಬ ಸಮೇತರಾಗಿ ಪಾಲ್ಗೊಂಡರು. ಆ ವೇಳೆ ಅವರು ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಿಲ್ಲಾಧಿಕಾರಿಯೊಂದಿಗೆ ಗ್ರಾಮಸ್ಥರೂ ಹೆಜ್ಜೆಹಾಕಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.


ಜನರೊಂದಿಗೆ ಬೆರೆತು ಕ್ರೀಡಾಕೂಟದ ಉತ್ಸಾಹ ಹಂಚಿಕೊಂಡ ಜಿಲ್ಲಾಧಿಕಾರಿ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


ಪ್ರವಾಸೋದ್ಯಮಕ್ಕೆ ಪೂರಕ
ಕರಾವಳಿ ತನ್ನದೇ ಆದ ಸಾಂಪ್ರದಾಯಿಕ ಆಚರಣೆಗಳಿಗೆ ಪ್ರಸಿದ್ಧಿ ಹೊಂದಿದೆ. ಆಧುನಿಕತೆಯ ಭರಾಟೆಯಲ್ಲಿ ನಗರೀಕರಣದತ್ತ ಸಾಗುತ್ತಿದ್ದರೂ ಇಲ್ಲಿನ ಜನತೆ ತಮ್ಮ ಹಿಂದಿನ ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ನಾನು ಕಂಡಿದ್ದೇನೆ.


ಅದಕ್ಕೊಂದು ಉದಾಹರಣೆಯಂತೆ `ಬಲೇ ಕೆಸರ್ಡ್ ಗೊಬ್ಬುಗ' ವಿನೂತನ ಗ್ರಾಮೀಣ ಕ್ರೀಡಾಕೂಟದಲ್ಲಿ ಪರೀಕ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ಕುಟುಂಬ ಸಹಿತ ಭಾಗವಹಿಸಿ ಗ್ರಾಮೀಣ ಜನರೊಂದಿಗೆ ಬೆರೆತಿರುವುದು ಬಹಳ ಸಂತೋಷವಾಯಿತು.


ಇಂಥ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಖಂಡಿತ ಸಹಾಯವಾಗುವುದಲ್ಲದೆ, ಕರಾವಳಿಯ ಭವ್ಯ ಪರಂಪರೆಯ ಉಳಿವಿಗೆ ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತನ್ನ `ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.