ತಂಬಾಕು ಮುಕ್ತ ಪ್ರದೇಶವನ್ನಾಗಿ ಘೋಷಿಸಿ

ಲೋಕಬಂಧು ನ್ಯೂಸ್ | ಮಣಿಪಾಲ, ಜು.5
ಜಿಲ್ಲೆಯ ಗ್ರಾಮ ಪಂಚಾಯತ್ ಹಾಗೂ ವಾರ್ಡ್‌ಗಳನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಿ ಘೋಷಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಕರೆ ನೀಡಿದರು.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕೋಟ್ಪಾ 2003 ಕಾಯ್ದೆ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತಗಳಂಥ ಮಾರಣಾಂತಿಕ ಕಾಯಿಲೆಗಳು ಸಂಭವಿಸುತ್ತವೆ. ಸಾರ್ವಜನಿಕರು ತಂಬಾಕು ಉತ್ಪನ್ನಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಅದಕ್ಕೆ ಪ್ರತಿಯೊಬ್ಬರೂ ಒತ್ತುನೀಡಬೇಕು ಎಂದರು.


ಜಿಲ್ಲೆಯಲ್ಲಿ ಕೆಲವು ಗ್ರಾಮ ಪಂಚಾಯತ್, ಗ್ರಾಮಗಳು, ಬಹುಮಹಡಿ ವಸತಿ ಸಮುಚ್ಛಯಗಳನ್ನು ತಂಬಾಕು ಮುಕ್ತ ಪ್ರದೇಶಗಳೆಂದು ಅಧಿಕೃತ ಘೋಷಣೆ ಮಾಡಲಾಗಿದೆ. ಸಾರ್ವಜನಿಕರಲ್ಲಿ ಅವುಗಳ ಸೇವನೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಸಮುದಾಯಗಳಲ್ಲಿ ಜಾಗೃತಿಗೊಳಿಸಿ ಹೆಚ್ಚು ಹೆಚ್ಚು ಗ್ರಾಮ ಪಂಚಾಯತ್'ಗಳು ಹಾಗೂ ವಾರ್ಡ್'ಗಳನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕು ಎಂದರು.


ಜಿಲ್ಲೆಯ ಶಾಲಾ ಕಾಲೇಜುಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ತಂಬಾಕು. ಉತ್ಪನ್ನಗಳ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳಿಂದ ತಂಬಾಕು ಮುಕ್ತ ಮಾರಾಟ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿ ಅಂಗಡಿ ಶಾಲಾ ಪರಿಮಿತಿ ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಗಳಾಗುತ್ತಿದೆಯೇ ಎಂದು ಪರಿಶೀಲಿಸಿ ಪರವಾನಿಗೆ ನೀಡಬೇಕು ಎಂದರು.


ಜಿಲ್ಲೆಯಲ್ಲಿ 33ಕ್ಕೂ ಹೆಚ್ಚು ದಿಢೀರ್ ದಾಳಿ ನಡೆಸಿ 245ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 70 ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿಯೂ ಕೋಟ್ಪಾ ಕಾಯ್ದೆ ಉಲ್ಲಂಘಿಸಿದ 31 ಪ್ರಕರಣಗಳಿಂದ 3,300 ರೂ. ದಂಡ ವಸೂಲು ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನಷ್ಟು ದಿಢೀರ್ ದಾಳಿ ನಡೆಸುವುದರೊಂದಿಗೆ ಕೋಟ್ಪಾ ಕಾಯ್ದೆಯ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು.


ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಮೊದಲಾದವರಿದ್ದರು.