ಲೋಕಬಂಧು ನ್ಯೂಸ್ ಬೆಳ್ತಂಗಡಿ, ಜು.15
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ತನಿಖೆಯ ಅಂತಿಮ ವರದಿ ಸಲ್ಲಿಸಿದೆ.ಈ ಹಿಂದೆ ಎಸ್‌ಐಟಿ ಅಧಿಕಾರಿಗಳು ಭಾರತೀಯ ನ್ಯಾಯ ಸಂಹಿತೆ ಕಲಂ 215ರಡಿ ಸಿ.ಎನ್. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ವಿರುದ್ಧ 3,923 ಪುಟಗಳ 'ಸುಳ್ಳು ಸಾಕ್ಷ್ಯ' ವರದಿ ಸಲ್ಲಿಸಿದ್ದರು. ಆದರೆ, ಆ ವರದಿ ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯ ಅಂತಿಮ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ನ್ಯಾಯಾಲಯದ ಸೂಚನೆಯಂತೆ ಎಸ್‌ಐಟಿ ಅಧಿಕಾರಿಗಳು ಜುಲೈ 15ರಂದು ಅಪರಾಹ್ನ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರಿಗೆ ಅಂತಿಮ ವರದಿ ಸಲ್ಲಿಸಿದರು.
ಈ ಹಿಂದೆ ಸಲ್ಲಿಸಲಾಗಿದ್ದ 3,923 ಪುಟಗಳ ವರದಿ ಹಾಗೂ ಹೊಸದಾಗಿ ಸಿದ್ಧಪಡಿಸಿದ 3,082 ಪುಟಗಳ ವರದಿಯನ್ನು ಒಳಗೊಂಡಂತೆ ಒಟ್ಟು 7,005 ಪುಟಗಳ ತನಿಖಾ ವರದಿಯನ್ನು 12 ಪ್ರತ್ಯೇಕ ಕಡತಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎಸ್‌ಐಟಿ ಎಸ್‌ಪಿ ಸಿ.ಎ.ಸೈಮನ್, ಇನ್‌ಸ್ಪೆಕ್ಟರ್'ಗಳಾದ ಕುಸುಮಾಧರ್ ಮತ್ತು ಮಂಜುನಾಥ್ ಹಾಗೂ ಎಸ್‌ಐಟಿ ಸಿಬ್ಬಂದಿ ಇದ್ದರು.