ಯಕ್ಷಗಾನದ ದಾಖಲೀಕರಣ ಅಗತ್ಯ

ಲೋಕಬಂಧು ನ್ಯೂಸ್ | ಉಡುಪಿ, ಜು.6
ಇಂದ್ರಾಳಿ ಯಕ್ಷಗಾನ ಕೇಂದ್ರ ಆಶ್ರಯದಲ್ಲಿ ಮಣಿಪಾಲ ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್.ಆರ್.ಸಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯದೊಂದಿಗೆ ವೀರ ವೃಷಸೇನ ಯಕ್ಷಗಾನ ದಾಖಲೀಕರಣ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಲಹೆಗಾರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್, ಯಕ್ಷಗಾನ ಕಾಲ-ಕಾಲಕ್ಕೆ ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಹಿಂದಿನ ಕಲಾವಿದರ ಪರಂಪರೆಯ ವೇಷಗಳು ಇಂದು ಕಣ್ಮರೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ದಾಖಲೀಕರಣ ಹೆಚ್ಚಿನ ಮಹತ್ವ ಪಡೆಯುತ್ತದೆ ಎಂದರು.
ಮುಂದಿನ ಕಲಾವಿದರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಹಾಗೂ ಅದನ್ನು ರಂಗದಲ್ಲಿ ಅಳವಡಿಸಿಕೊಂಡು ಯಕ್ಷಗಾನ ಕಲೆಯ ಮೂಲ ಸತ್ವ, ಸ್ವರೂಪವನ್ನು ಇಂದಿನವರಿಗೂ ತಲುಪಿಸುವ ಕೆಲಸ ಮಾಡುವ ಉದ್ದೇಶದಿಂದ ಈ ದಾಖಲೀಕರಣ ಕಾರ್ಯ ಮಾಡಲಾಗುತ್ತಿದೆ ಎಂದವರು ಹೇಳಿದರು.


ಹಿಂದಿನ ಕಲಾವಿದರು ಸನ್ನಿವೇಶವನ್ನು ರಂಗದ ಮೇಲೆ ಕಟ್ಟುತ್ತಿದ್ದ ರೀತಿ ಅನನ್ಯವಾದುದು. ಹಳೆಯದು ಯಾವಾಗಲೂ ಅಮೂಲ್ಯವಾದುದು. ಅದನ್ನು ಉಳಿಸಿ, ಬೆಳೆಸಿಕೊಂಡು ಬರಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಯಕ್ಷಗಾನ ಕೇಂದ್ರದ ಪ್ರಯತ್ನ ಶ್ಲಾಘನೀಯ ಎಂದರು.


ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ ನಮ್ಮ ಸಾಹಿತ್ಯ ಕಲೆ, ಸಂಸ್ಕೃತಿ ಅತ್ಯಂತ ಮಹತ್ವವಾಗಿದ್ದು, ಅದರಲ್ಲೂ ಶುದ್ಧ ಕನ್ನಡ ಬಳಕೆಯ ಯಕ್ಷಗಾನ ಕಲೆಯಿಂದಲೂ ಕನ್ನಡ ಭಾಷೆ ಉಳಿಯಲು ಸಾಧ್ಯ. ಇಂಥ ದಾಖಲೀಕರಣದ ಮೂಲಕ ಹೊಸ ತಲೆಮಾರಿಗೆ ಪರಂಪರೆಯ ಯಕ್ಷಗಾನ ತಲುಪಿಸುವ ಕೆಲಸ ಮಾಡಬೇಕು ಎಂದರು.


ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.


ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ವೈದ್ಯ ಡಾ.ಜಗದೀಶ್ ಶೆಟ್ಟಿ ಸಿದ್ದಾಪುರ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಶೆಣೈ, ಮೀನಾ ಲಕ್ಷಣಿ ಅಡ್ಯಂತಾಯ, ವಿ.ಜಿ. ಶೆಟ್ಟಿ ಮತ್ತು ಭುವನಪ್ರಸಾದ್ ಹೆಗ್ಡೆ ಇದ್ದರು.


ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮೇಶ್ ಸುವರ್ಣ ಪ್ರಾರ್ಥಿಸಿದರು. ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.