ಜ್ಞಾನ ದಾಸೋಹದಿಂದ ಶಾಶ್ವತ ಸುಖ ಶಾಂತಿ ನೆಮ್ಮದಿ

ಲೋಕಬಂಧು ನ್ಯೂಸ್ ಉಜಿರೆ, ಜು.16
ಜ್ಞಾನ ದಾಸೋಹದಿಂದ ಆತ್ಮನ ಸಾಕ್ಷಾತ್ಕಾರವಾಗಿ ಭಗವಂತನ ಸಾನ್ನಿಧ್ಯದೊಂದಿಗೆ ಶಾಶ್ವತ ಸುಖ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ 55ನೇ ವರ್ಷದ ಪುರಾಣ-ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪುರಾಣ ಕಾವ್ಯ ವಾಚನ- ಪ್ರವಚನ ಅಮೂಲ್ಯ ಜ್ಞಾನಸತ್ರವಾಗಿದ್ದು, ಶ್ರೋತೃಗಳು ಆಧ್ಯಾತ್ಮದಲ್ಲಿ  ತೊಡಗಿಕೊಳ್ಳಲು ಉತ್ತಮ ಅವಕಾಶವಾಗಿದೆ. ದೇಹ ನಶ್ವರ ಹಾಗೂ ಆತ್ಮ ಶಾಶ್ವತವಾಗಿದ್ದು ನಮ್ಮ ಕರ್ತವ್ಯ ಮತ್ತು ಕರ್ಮವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಬೇಕು.


ಜ್ಞಾನಯೋಗ ಮತ್ತು ಕರ್ಮಯೋಗದಿಂದ ಮಾತ್ರ ಶಾಶ್ವತ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಅರಿಷಡ್ವರ್ಗಗಳನ್ನು ಗೆಲ್ಲಬೇಕು. ಆಗ ಮಾತ್ರ ಶ್ರದ್ಧಾಭಕ್ತಿಯಿಂದ ಧರ್ಮದ ಮರ್ಮವನ್ನರಿತು ಸುಖ-ಶಾಂತಿ, ನೆಮ್ಮದಿ ಪಡೆಯಬಹುದು ಎಂದರು.


'ಸಮ್ಯಕ್‌ ದರ್ಶನ, ಜ್ಞಾನ, ಚಾರಿತ್ರಾಣಿ ಮೋಕ್ಷ ಮಾರ್ಗಃ'  ಎಂದರೆ ರತ್ನತ್ರಯ ಧರ್ಮದ ಪಾಲನೆಯಿಂದ ಶಾಶ್ವತ ಸುಖ ಪಡೆಯಬಹುದು ಎಂಬ ಜೈನ ಧರ್ಮದ ಸಾರವನ್ನು ಸ್ವಾಮೀಜಿ ವಿಶೇಷವಾಗಿ ಉಲ್ಲೇಖಿಸಿದರು.


ಸಮಯ ಸದುಪಯೋಗಪಡಿಸಿ
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ‌ ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಯ ಅಮೂಲ್ಯವಾಗಿದ್ದು ಅದರ ಸದುಪಯೋಗ ಮಾಡಬೇಕು. ಎಲ್ಲರಿಗೂ ಕಾಲಪ್ರಜ್ಞೆ ಇರಬೇಕು. ಧರ್ಮದ ಮರ್ಮವನ್ನರಿತು ಅನುಷ್ಠಾನ ಮಾಡಿದರೆ ಜೀವನ ಪಾವನವಾಗುತ್ತದೆ. ಧರ್ಮದಿಂದ ವಿಮುಖರಾದರೆ ಸರ್ವನಾಶವಾಗುತ್ತದೆ.


ಪುರಾಣ ಕಾವ್ಯ ವಾಚನ-ಪ್ರವಚನದ ಮೂಲಕ ಸಮಯದ ಸದ್ವಿನಿಯೋಗ ಮಾಡಿಕೊಳ್ಳಿ ಎಂದು ಹೆಗ್ಗಡೆ ಸಲಹೆ ನೀಡಿದರು.


ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿ, ಶ್ರೀನಿವಾಸ ರಾವ್ ಧರ್ಮಸ್ಥಳ ವಂದಿಸಿದರು.