ಲೋಕಬಂಧು ನ್ಯೂಸ್ | ಮಣಿಪಾಲ, ಜು.30
ಬಸವಣ್ಣನ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ಅಂದಿನ ಕಾಲದಲ್ಲಿ ಸಮಾಜ ಎದುರಿಸುತ್ತಿದ್ದ ಮೌಢ್ಯತೆಗಳನ್ನು ಧಿಕ್ಕರಿಸಿ, ತನ್ನ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಶರಣರಾಗಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಇಂದಿಗೂ ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿದೆ ಎಂದು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಹೇಳಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕಾಲ-ಕಾಲಕ್ಕೆ ಹಲವಾರು ನಾಯಕರು, ಸಂತರು, ದಾಸರು, ದಾರ್ಶನಿಕರು ಜನ್ಮತಾಳಿ ಸಮಾಜ ಸುಧಾರಣೆಗಾಗಿ ಹೆಜ್ಜೆ ಇಟ್ಟಿದ್ದಾರೆ. ಅದೇ ರೀತಿ 12ನೇ ಶತಮಾನದಲ್ಲಿ ಬಸವಣ್ಣ ಅಂದಿನ ಕಾಲಘಟ್ಟದಲ್ಲಿದ್ದ ಮೇಲು- ಕೀಳು, ಅಸ್ಪೃಶ್ಯತೆ, ಅನಾಚಾರ, ಕಂದಾಚಾರ ಸೇರಿದಂತೆ ಸಾಮಾಜಿಕ ಶೋಷಣೆಗಳ ವಿರುದ್ಧ ಹೋರಾಡಲು ಜನರಿಗೆ ವಚನಗಳ ಮೂಲಕ ಮನಮುಟ್ಟುವಂತೆ ತಿಳಿಹೇಳುತ್ತಿದ್ದರು. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಜಾತಿ ಪದ್ಧತಿ, ಮೂಢನಂಬಿಕೆ ಮತ್ತು ಅಸಮಾನತೆ ವಿರುದ್ಧ ತನ್ನ ವಚನಗಳ ಮೂಲಕ ಸಾಮಾಜಿಕ ಸುಧಾರಣೆಗೆ ಧ್ವನಿ ಎತ್ತಿದ್ದರು ಎಂದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ, ಬದ್ಧತೆಯಿಂದ ಮಾಡಬೇಕು. ನುಡಿದಂತೆ ನಡೆಯಬೇಕು. ಪ್ರಸ್ತುತ ಸಮಾಜದಲ್ಲಿ ದುಶ್ಚಟಗಳಿಂದ ದೂರ ಉಳಿಯುವುದರೊಂದಿಗೆ ಯುವ ಪೀಳಿಗೆ ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಪೋಷಕರು, ಗುರು-ಹಿರಿಯರ ಜವಾಬ್ದಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಹಡಪದ ಅಪ್ಪಣ್ಣ ಅವರು ಬಸವಣ್ಣನ ಕಾಯಕವೇ ಕೈಲಾಸ ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದ್ದರು. ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಇಂಥ ಮಹಾನ್ ದಾರ್ಶನಿಕರ ಆದರ್ಶಗಳು, ಕಾಯಕ ನಿಷ್ಠೆ, ಸಮಾಜಸೇವಾ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಶಿಕ್ಷಕ ಜಿ.ಪಿ ಪ್ರಭಾಕರ ತುಮರಿ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣನ ಬಲಗೈ ಬಂಟ ಎಂದೇ ಹೆಸರು ಪಡೆದಿದ್ದರು. ಶ್ರಮ ಜೀವನಕ್ಕೆ ಗೌರವ ನೀಡಿದ ಅವರು ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಸುಮಾರು 240ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ಅವುಗಳಲ್ಲಿ ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ವಂದಿಸಿದರು. ರಾಜ್ಯ ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾಧಿಕಾರಿ ಕಚೇರಿಯ ಸಂಪತ್ ಮೊದಲಾದವರಿದ್ದರು.
.jpg)
.jpg)