ಜು.15: ಉಡುಪಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ

ಲೋಕಬಂಧು ನ್ಯೂಸ್ | ಉಡುಪಿ, ಜು‌.14
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದ ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಶ್ರಯದಲ್ಲಿ 'ವಂದೇ ಮಾತರಂ' 150ನೇ ವರ್ಷದ ಸಂಭ್ರಮ ಹಾಗೂ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಅಂಗವಾಗಿ ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಟಕೋತ್ಸವ ಜುಲೈ 15ರಂದು ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿದೆ.
ಅದರಂತೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಹಾಗೂ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ 'ವಂದೇ ಮಾತರಂ' ಉತ್ಸವ, ಯುವ ರಂಗೋತ್ಸವ ಹಾಗೂ 'ಸ್ವಾತಂತ್ರ್ಯ ಶರಧಿ' ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ದೇಶಪ್ರೇಮ, ಸಂಸ್ಕೃತಿ ಹಾಗೂ ಭಾರತೀಯ ರಂಗಭೂಮಿಯ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ದೇಶದಾದ್ಯಂತ 150ಕ್ಕೂ ಅಧಿಕ ರಂಗ ಪ್ರಯೋಗಗಳನ್ನು ಆಯೋಜಿಸಲಾಗಿದೆ. 39ಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳಲ್ಲಿ ಈ ರಂಗೋತ್ಸವ ನಡೆಯಲಿದ್ದು, 'ಒಂದು ದೇಶ-ಒಂದು ಆಚರಣೆ' ಎಂಬ ಭಾವೈಕ್ಯತೆಯ ಸಂದೇಶ ಸಾರಲಿದೆ. ಸುಮಾರು 4 ಸಾವಿರಕ್ಕೂ ಅಧಿಕ ರಂಗಕರ್ಮಿಗಳು ಭಾಗವಹಿಸಲಿದ್ದು, 150ಕ್ಕೂ ಹೆಚ್ಚು ಸಂಸ್ಥೆಗಳು ಸಹಭಾಗಿತ್ವ ವಹಿಸಿವೆ. 20 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರನ್ನು ತಲುಪುವ ಗುರಿಯೊಂದಿಗೆ ಯುವಜನರಲ್ಲಿ ರಂಗಭೂಮಿ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.


ಕರ್ನಾಟಕದಲ್ಲಿ ಬೆಂಗಳೂರು ಜೊತೆಗೆ ಉಡುಪಿಯನ್ನು ಈ ವಿಶೇಷ ಉತ್ಸವಕ್ಕೆ ಆಯ್ಕೆ ಮಾಡಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಆರು ದಶಕಗಳ ಇತಿಹಾಸ ಹೊಂದಿರುವ ರಂಗಭೂಮಿ ಉಡುಪಿ ಸಂಸ್ಥೆಗೆ ವಹಿಸಿರುವುದು ಸಂಸ್ಥೆಯ ಕಲಾಸೇವೆಗೆ ಸಂದ ಗೌರವವಾಗಿದೆ.


ಜು.15ರಂದು ಸಂಜೆ 5.30ರಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುವ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಸಂಸದ ‌ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ. ಸುನಿಲ್ ಕುಮಾ‌ರ್, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್,‌ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಅಂಬಲಪಾಡಿ ದೇವಸ್ಥಾನದ ಡಾ. ಎನ್.ಬಿ.ವಿಜಯ ಬಲ್ಲಾಳ್, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರಿಧರ ಪೈ, ಡಾ.ದೇವಿದಾಸ್ ನಾಯಕ್‌, ಮಾಲತಿದೇವಿ ಮತ್ತು ಡಾ.ವಿಶ್ವನಾಥ ಪೈ ಹಾಗೂ ಜಿಲ್ಲೆಯ ವಿವಿಧ ರಂಗತಂಡಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.


ಮಹಾಕವಿ ಕಾಳಿದಾಸ ಬಗ್ಗೆ ವಿದ್ಯಾವಂತ ಆಚಾರ್ಯ ಮತ್ತು ಜಿ.ಪಿ. ಪ್ರಭಾಕರ ತುಮರಿ ಹಾಗೂ ವಂದೇ ಮಾತರಂ ಕುರಿತು ಪ್ರೊ.ಪವನ ಕಿರಣಕೆರೆ ಮಾತನಾಡುವರು ಎಂದರು.


ಬಳಿಕ 75 ನಿಮಿಷಗಳವಧಿಯ 'ಸ್ವಾತಂತ್ರ್ಯ ಶರಧಿ'‌ ನಾಟಕ ಪ್ರದರ್ಶನವಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಜಿಲ್ಲೆಗಳ ಪಾತ್ರವನ್ನು ಬಿಂಬಿಸಲಾಗುವುದು ಎಂದರು.


ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಕೋಶಾಧಿಕಾರಿ ಭೋಜ ಯು. ಹಾಗೂ ಆಡಳಿತ ಮಂಡಳಿ ಸದಸ್ಯ ಗಿರೀಶ್ ತಂತ್ರಿ ಇದ್ದರು.