ಯಕ್ಷಗಾನದಲ್ಲಿ ಮನರಂಜನೆ ಜೊತೆ ಜೀವನ ಪಾಠ

ಲೋಕಬಂಧು ನ್ಯೂಸ್ ಉಡುಪಿ, ಜು.15
ಯಕ್ಷಗಾನ ಕಲೆ ಕೇವಲ ಮನೋರಂಜನೆಗೆ ಮಾತ್ರವಲ್ಲ, ಅದರಲ್ಲಿ ಜೀವನ ಪಾಠವಿದೆ. ಹಾಗಾಗಿ ಆ ಕಲೆಯ ಪೋಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ರಸಿಕ ರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ ಸಹಯೋಗದೊಂದಿಗೆ ರಾಜಾಂಗಣದಲ್ಲಿ ನಡೆದ ಸರಳೆಬೆಟ್ಟು ಶ್ರೀ ಮಿತ್ರ ಯಕ್ಷಗಾನ ಮಂಡಳಿಯ 44ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಮಾಜದ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಇದು ಅನ್ಯರಿಗೆ ಪ್ರೇರಣೆಯಾಗುತ್ತದೆ. ಕಲೆಯ ರಕ್ಷಣೆ ಜೊತೆಗೆ ಕಲಾವಿದರ ಬೆಳವಣಿಗೆಗೂ ಕೊಡುಗೆ ನೀಡುತ್ತಿರುವ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಅಭಿನಂದನಾರ್ಹ ಎಂದರು.



ಅಧ್ಯಕ್ಷತೆ ವಹಿಸಿದ್ದ  ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ನಿಸ್ವಾರ್ಥ ಕಲಾಪ್ರೇಮಿಗಳ ಸಹಕಾರದಿಂದಾಗಿ ಇಂದು ಯಕ್ಷಗಾನ ಕಲೆ ವಿಶ್ವವ್ಯಾಪಿಯಾಗಲು ಕಾರಣವಾಗಿದೆ. ವೈದ್ಯರು, ಶಿಕ್ಷಕರು, ಇಂಜಿನಿಯರ್'ಗಳು ಸೇರಿದಂತೆ ಸುಶಿಕ್ಷಿತರು ಯಕ್ಷಗಾನ ಕಲಿತು ಈ ಕಲೆಯ ಗೌರವವನ್ನು ಹೆಚ್ಚಿಸಿದ್ದಾರೆ  ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ, ಕಲಾಪೋಷಕ ಬೈಕಾಡಿ ಕೃಷ್ಣಯ್ಯ ಸ್ಮಾರಕ 'ಯಕ್ಷಶ್ರೀ' ಪ್ರಶಸ್ತಿಯನ್ನು ತಬ್ಲಾ ವಾದಕ ವಿದ್ವಾನ್ ಮಾಧವ ಆಚಾರ್ಯ ಉಡುಪಿ, ಭಾಗವತ ಗುರು ಅಲೆವೂರು ಮಾಧವ ಶೆಣೈ ಸ್ಮಾರಕ 'ಯಕ್ಷಮಿತ್ರಶ್ರೀ' ಪ್ರಶಸ್ತಿಯನ್ನು ಕಲಾವಿದ  ಗಣೇಶ್ ಶೆಣೈ ಸಾಲಿಗ್ರಾಮ, ಭಾಗವತ ಗುರು ಗೋರ್ಪಾಡಿ ವಿಠಲ್ ಪಾಟೀಲ್ ಸ್ಮಾರಕ 'ಯಕ್ಷಕಲಾಶ್ರೀ' ಪ್ರಶಸ್ತಿಯನ್ನು ಕಲಾವಿದ  ಕೃಷ್ಣಯ್ಯ ದೇವಾಡಿಗ ಉಪ್ಪುಂದ, ಕಪ್ಪೆಟ್ಟು ಮೇಲ್ಮನೆ ಕೆ. ರನಾರಾಯಣ ಶೆಟ್ಟಿ 'ಮಿತ್ರಕಲಾಶ್ರೀ' ಪ್ರಶಸ್ತಿಯನ್ನು ಹವ್ಯಾಸಿ ಯಕ್ಷಗಾನ ಕಲಾವಿದ ವೆಂಕಟೇಶ್ವರ ಹಾರಾಡಿ, ಪರ್ಕಳ ಮಂಜುನಾಥ ಶೆಣೈ ಸ್ಮಾರಕ 'ಮಿತ್ರಶ್ರೀ' ಪ್ರಶಸ್ತಿಯನ್ನು,ಕೊಳಲು ವಾದಕ ಸುಂದರ ಪೂಜಾರಿ ಉಡುಪಿ, ಹೂರ್ಲಾಳಿ ನಾಗೇಶ ವಾಮನ ಶಾನುಭಾಗ್ ಸ್ಮಾರಕ 'ಕಲಾಶ್ರೀ' ಪ್ರಶಸ್ತಿಯನ್ನು ದೇವಕಿ ಕೋಟ್ಯಾನ್ ಸರಳೇಬೆಟ್ಟು ಕಲಾಪೋಷಕ ಸರಳೇಬೆಟ್ಟು ಪಾಂಡುರಂಗ ಸಾಮಂತ್ ಸ್ಮಾರಕ 'ಮಿತ್ರಯಕ್ಷಶ್ರೀ' ಪ್ರಶಸ್ತಿಯನ್ನು ಗುರು )ವೈ. ಕುಮಾರಸ್ವಾಮಿ ಕಬ್ಬಿನಾಲೆ, ಜಡ್ಡುಮನೆ ರಂಗಪ್ಪ ಪ್ರಭು ಪೆರ್ಣಕಿಲ  ಸ್ಮಾರಕ 'ಶ್ರೀಮಿತ್ರ' ಪ್ರಶಸ್ತಿಯನ್ನು ಪತ್ರಕರ್ತ  ಎಚ್. ಜ್ಞಾನದೇವ ಮಲ್ಯ ಕುಂಜಿಬೆಟ್ಟು, ಕಲಾಪೋಷಕಿ ತೋನ್ಸೆ ಗೀತಾ ಮಂಜುನಾಥ ಪೈ ಸ್ಮಾರಕ "ಶ್ರೀಮಿತ್ರ ವೈಭವ' ಪ್ರಶಸ್ತಿಯನ್ನು ನೀತಾ ಪ್ರಭು ಅಂಬಲಪಾಡಿ, ಚಿಂತಕ ಎಂ.ವಿ. ಪಡಿಯಾರ್ ಸ್ಮಾರಕ ಕಲಾ ಸಾಧಕ ಪುರಸ್ಕಾರವನ್ನು ರಂಗ ಕಲಾವಿದೆ  ಶಿಲ್ಪಾ ಜೋಶಿ ಪರ್ಕಳ, ಮೋಹನ್ ಭಟ್ ಮೆಮೋರಿಯಲ್ ಯಕ್ಷ ವೈಭವ ಪ್ರಶಸ್ತಿಯನ್ನು  ಸಂಗೀತ ಕಲಾವಿದೆ ಯುಕ್ತಾವತಿ ಆರ್. ಭಂಡಾರಿ ಬ್ರಹ್ಮಗಿರಿ ಹಾಗೂ ಕಲಾಪೋಷಕ ಮುಲ್ಕಿ ಸದಾಶಿವ ಕಾಮತ್ ಯಕ್ಷಕಲಾ ಪ್ರಶಸ್ತಿಯನ್ನು ಹವ್ಯಾಸಿ ಯಕ್ಷಗಾನ ಕಲಾವಿದ ಅರುಣ್ ಉಡುಪಿ ಅವರಿಗೆ ಪ್ರದಾನ ಮಾಡಲಾಯಿತು.

ಪರ್ಯಾಯ ಶೀರೂರು ಮಠದ ವ್ಯವಸ್ಥಾಪಕ ವಾಸುದೇವ ಆಚಾರ್ಯ, ಹೆರ್ಗ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ನಿವೃತ್ತ ಎಜಿಎಂ ಎಸ್. ಅನಂತ ನಾಯ್ಕ್ , ಸಂಸ್ಥೆ ಅಧ್ಯಕ್ಷ ಎಚ್.ಪ್ರಕಾಶ್ ಶಾನುಭಾಗ್, ಸದಾನಂದ ಪ್ರಭು ಪೆರ್ಣಂಕಿಲ, ಶ್ರುತಿ ಶೆಣೈ, ನಾರಾಯಣ ಬಿ.ಕೆ., ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮೊದಲಾದವರಿದ್ದರು.



ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನಾ ನುಡಿಗನ್ನಾಡಿದರು.
ಬಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಶೆಟ್ಟಿ ವಂದಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಬಾಲ ಕಲಾವಿದರಿಂದ 'ಕೃಷ್ಣಲೀಲೆ- ಕಂಸವಧೆ' ಯಕ್ಷಗಾನ ಪ್ರದರ್ಶನ ಗೊಂಡಿತು.