ರೈಲ್ವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಲಿಫ್ಟ್ ವ್ಯವಸ್ಥೆ

ಲೋಕಬಂಧು ನ್ಯೂಸ್ ಉಡುಪಿ, ಜು‌.17
ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿದೆ. ವೃದ್ಧರು, ವಿಶೇಷಚೇತನರು, ಗರ್ಭಿಣಿಯರು ಹಸಗೂ ಅಶಕ್ತರು ಒಂದು ಪ್ಲಾಟ್ ಫಾರ್ಮ್'ನಿಂದ ಮತ್ತೊಂದು ಪ್ಯಾಟ್ ಫಾರ್ಮ್'ಗೆ ಸುಲಭವಾಗಿ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ವತಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 2.26 ಕೋಟಿ ರೂ. ವೆಚ್ಚದಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ನಗರದ ಇಂದ್ರಾಳಿ ರೈಲ್ವೆ ನಿಲ್ದಾಣದ 1 ಮತ್ತು 2ನೇ ಪ್ಲಾಟ್ ಫಾರ್ಮ್'ನಲ್ಲಿ ಹೊಸದಾಗಿ ಅಳವಡಿಸಲಾದ ಲಿಫ್ಟ್'ಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ಉಡುಪಿಗೆ ಹೊರರಾಜ್ಯ, ಜಿಲ್ಲೆಗಳಿಂದ ಶಿಕ್ಷಣ, ವೈದ್ಯಕೀಯ ಸೌಲಭ್ಯ, ಪ್ರವಾಸ ಮತ್ತಿತರ ಕಾರ್ಯಗಳಿಗಾಗಿ ಜನರು ಆಗಮಿಸುತ್ತಾರೆ ಹಾಗೂ ಅನ್ಯಕಾರ್ಯಗಳ ನಿಮಿತ್ತ ಬೇರೆಡೆಗೆ ತೆರಳಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಿದ್ದಾರೆ. ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್'ಗಳಿಗೆ ಹೋಗಲು ಇರುವ ಓವರ್ ಬ್ರಿಡ್ಜ್'ಗಳಿಗೆ ಲಿಫ್ಟ್ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದರು.


ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು ಎಂದು ಕರಾವಳಿ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದು, ಒಂದೊಮ್ಮೆ ವಿಲೀನವಾದಲ್ಲಿ ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆತು ಕೊಂಕಣ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ. ಆದಷ್ಟು ಶೀಘ್ರವಾಗಿ ವಿಲೀನಗೊಳಿಸಲು ಪ್ರಯತ್ನಿಸಲಾಗುವುದು ಎಂದರು.


ವಂದೇ ಭಾರತ್ ರೈಲು ಪ್ರಾಯೋಗಿಕವಾಗಿ ಸಂಚಸುತ್ತಿದ್ದು ಬೆಂಗಳೂರಿನಿಂದ ಹೊರಟು ಮಂಗಳೂರು, ಉಡುಪಿ ಹಾಗೂ ಕರಾವಳಿಯ ಕೊನೆಯ ಹಂತವಾದ ಕಾರವಾರದ ವರೆಗೆ ಸಂಚರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾಯೋಗಿಕ ಸರ್ವೇ ಕಾರ್ಯಗಳು ನಡೆಯುತ್ತಿವೆ.


ಮುಂದಿನ ದಿನಗಳಲ್ಲಿ ಬಾರ್ಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು 14 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾದಲ್ಲಿ ಶೆಲ್ಟರ್ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.


ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಲಿಫ್ಟ್ ಸೇವೆಗೆ ಚಾಲನೆ ನೀಡಲಾಗಿದೆ. ರೈಲ್ವೆ ಇಲಾಖೆ ಮೂಲಕ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕಾಣುತ್ತಿದ್ದೇವೆ. ಪ್ರಯಾಣಿಕರು ರಾತ್ರಿ ವೇಳೆ ಆಶ್ರಯ ಪಡೆಯಲು ಅನುಕೂಲವಾಗುವಂತೆ ಈಗಾಗಲೇ ಶೆಲ್ಟರ್ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್ ಯೋಜನೆಯಡಿ ದೇಶದಾದ್ಯಂತ ಸುಮಾರು 75 ರೈಲ್ವೆ ಸ್ಟೇಷನ್'ಗಳಲ್ಲಿ ಮೇಲ್ದರ್ಜೆ ಕಾಮಗಾರಿಗಳಿಗೆ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಹೈಡ್ರೋಜನ್ ಪವರ್ಡ್ ಟ್ರೈನ್'ಗೂ ಚಾಲನೆ ನೀಡಲಿದ್ದಾರೆ ಎಂದರು.


ಮುಂದಿನ ದಿನಗಳಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ, ಪಾರ್ಕಿಂಗ್, ಸಂಪರ್ಕ ವ್ಯವಸ್ಥೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದ ಅವರು, ಇಂದ್ರಾಳಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಹಳ ಕಿರಿದಾಗಿದ್ದು, ಅದನ್ನು ಮಾಸ್ಟರ್ ಪ್ಲಾನ್'ಗೆ ಅಳವಡಿಸುವ ಮೂಲಕ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕು. ಅದರಿಂದ ಪ್ರಯಾಣಿಕರು ಮತ್ತು ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು.


ಇದೇ ಸಂದರ್ಭದಲ್ಲಿ ರೈಲ್ವೆ ಯಾತ್ರಿಕರ ಸಂಘದ ವತಿಯಿಂದ ಉಡುಪಿ ರೈಲ್ವೆ ನಿಲ್ದಾಣದ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಸಂಸದರಿಗೆ ಮನವಿ ನೀಡಲಾಯಿತು.


ಕಾರ್ಯಕ್ರಮದಲ್ಲಿ ಡೆಪ್ಯುಟಿ ಚೀಫ್ ಇಂಜಿನಿಯರ್ ವಿಜಯ್ ಕುಮಾರ್, ಕೊಂಕಣ ರೈಲ್ವೆ ಪಿ.ಆರ್.ಓ ಸುಧಾ ಕೃಷ್ಣಮೂರ್ತಿ ಮೊದಲಾದವರಿದ್ದರು.


ಕಾರವಾರ ರೀಜನಲ್ ರೈಲ್ವೆ ಮ್ಯಾನೆಜರ್ ಆಶಾ ಶೆಟ್ಟಿ ಸ್ವಾಗತಿಸಿ, ಕೊಂಕಣ ರೈಲ್ವೆಯ ಸೀನಿಯರ್ ಡಿವಿಜನಲ್ ಮ್ಯಾನೆಜರ್ ದಿಲೀಪ್ ಭಟ್ ವಂದಿಸಿದರು. ಅವಿನಾಶ್ ಕಾಮತ್ ನಿರೂಪಿಸಿದರು.