ವಿಘ್ನ ನಿವಾರಣೆಗೆ ಗಣಪತಿ ಅನುಗ್ರಹ ಅಗತ್ಯ

ಲೋಕಬಂಧು ನ್ಯೂಸ್ ಉಡುಪಿ, ಜು.14
ವಿಘ್ನಾಧಿರಾಜನಾದ ಗಣಪತಿ ಕಷ್ಟ ನಿವಾರಕನೂ ಕಷ್ಟ ಪ್ರದಾಯನೂ ಅಗಿದ್ದಾನೆ. ಆತನ ಅನುಗ್ರಹ ಎಲ್ಲರಿಗೂ ಬೇಕು. ಮನುಷ್ಯ ಮಾಡುವ ಉತ್ತಮ ಕೆಲಸಗಳಿಗೆ ಅಡ್ಡಿಯಾಗುವ ವಿಘ್ನಗಳ ನಿವಾರಣೆಗೆ ಗಣಪತಿಯ ನಿತ್ಯ ಪ್ರಾರ್ಥನೆ ಅಗತ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಜ್ರ ಮಹೋತ್ಸವ ಕಾರ್ಯಕ್ರಮದ ಕಚೇರಿಯನ್ನು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳ ಆವರಣದಲ್ಲಿ ಮಂಗಳವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.


ಕಡಿಯಾಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಗಳನ್ನೂ ನಡೆಸಿಕೊಂಡು ಬಂದಿರುವುದು ಸಂತಸದಾಯಕ ಎಂದರು.


ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಯಶಪಾಲ್ ಸುವರ್ಣ ಲೋಗೊ ಬಿಡುಗಡೆಗೊಳಿಸಿ, ಮಹೋತ್ಸವದ ಯಶಸ್ಸಿಗೆ ಸರ್ವ ರೀತಿಯ ಸಹಕಾರದ ಭರವಸೆ ನೀಡಿದರು.


ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು.


ಕಡಿಯಾಳಿ ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ ಹೆಗ್ಡೆ, ದೇವಳದ ಆಡಳಿತ ಸಮಿತಿ ಸದಸ್ಯ ಕುಂಜಿಬೆಟ್ಟು ರವಿರಾಜ ಆಚಾರ್ಯ ಅಭ್ಯಾಗತರಾಗಿದ್ದರು. ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಮಂಜುನಾಥ ಹೆಬ್ಬಾರ್ ವೇದಿಕೆಯಲ್ಲಿದ್ದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, 1967ರಲ್ಲಿ 5 ಮಂದಿಯಿಂದ ಆರಂಭಗೊಂಡ ಉಡುಪಿಯ ಮೊತ್ತಮೊದಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಾಮಾಜಿಕ ಕಾರ್ಯದಲ್ಲೂ ತೊಡಗಿದೆ. `ಆಸರೆ 'ಟ್ರಸ್ಟ್ ಮೂಲಕ 23 ಮಂದಿಗೆ ಮನೆ ನಿರ್ಮಾಣ, ಅವಕಾಶ ವಂಚಿತ 76 ಮಕ್ಕಳಿಗೆ ಶಿಕ್ಷಣ, ವಿದ್ಯುತ್ ಸಂಪರ್ಕ ರಹಿತ 221 ಮನೆಗಳಿಗೆ ಬೆಳಕು ನೀಡುವ ಕಾರ್ಯ ಮಾಡಿದ್ದು, ಮುಂದಿನ ಒಂದು ವರ್ಷದೊಳಗೆ ಶೇ.100 ವಿದ್ಯುತ್ ಸಂಪರ್ಕವುಳ್ಳ ಮನೆಗಳನ್ನಾಗಿ ಉಡುಪಿಯನ್ನು ದೇಶದಲ್ಲೇ ಮೊದಲ ನಗರವಾಗಿಸಲು ಸಂಕಲ್ಪಿಸಲಾಗಿದೆ ಎಂದರು.


ಸಮಿತಿ ಸದಸ್ಯ ಗಿರೀಶ್ ಅಂಚನ್ ನಿರೂಪಿಸಿದರು