ಪ್ರೊ.ಎಂ.ರಾಮಚಂದ್ರ ಸಂಸ್ಮರಣ ಪ್ರಶಸ್ತಿಗೆ ಮಹಾಬಲ ಮರವಂತೆ

ಲೋಕಬಂಧು ನ್ಯೂಸ್‌ ಕಾರ್ಕಳ, ಜು.14
ಇಲ್ಲಿನ ಸಾಹಿತ್ಯ ಸಂಘದ ಸಂಸ್ಥಾಪಕ ಪ್ರೊ.ಎಂ.ರಾಮಚಂದ್ರ ಹೆಸರಿನ ಪ್ರಶಸ್ತಿಗೆ ಬೈಂದೂರು ತಾಲೂಕು ಕಿರಿಮಂಜೇಶ್ವರದ ಮಹಾಬಲ ಕೆ. ಮರವಂತೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಓರ್ವ ಶಿಕ್ಷಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ತಿಂಗಳ 20ರಂದು ಇಲ್ಲಿನ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಸಾಹಿತ್ಯ ಸಂಘದ ಅಧ್ಯಕ್ಷ ಕೆ.ಪಿ.ಶೆಣೈ ಅಧ್ಯಕ್ಷತೆಯಲ್ಲಿ ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ವಿರೇಶಾನಂದ ಸರಸ್ವತಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಡುಪಿ ಡಯಟ್ ಪ್ರಾಚಾರ್ಯ ಡಾ.ಅಶೋಕ್ ಕಾಮತ್ ಅಭ್ಯಾಗತರಾಗಿ ಆಗಮಿಸುವರು.


ಮಹಾಬಲ ಅವರು ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಮಕ್ಕಳ ಕಥೆ, ಕವನ, ಶಿಶುಗೀತೆ, ರುಬಾಯಿ, ಚುಟುಕುಗಳಂಥ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ ವಾರ್ಷಿಕ ಸಂಚಿಕೆ, ಚಿತ್ರಕಲೆ, ಕ್ರಾಫ್ಟ್ ಅಲ್ಲದೆ ಪರಿಸರ ರಕ್ಷಣೆಯಲ್ಲೂ ತೊಡಗಿಕೊಂಡಿದ್ದಾರೆ.


ಅವರ `ಇಂದೇ ಶಾಲೆಗೆ ಬಾರಮ್ಮ', `ಗಾನ ವನಸಿರಿ' ಮಕ್ಕಳ ಕವನ ಸಂಕಲನ ಬಿಡುಗಡೆಯಾಗಿವೆ. `ನೆನಪಿನೋಲೆ' ಕವನಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿದೆ. 'ಮರೆಯಲಾಗದ ಮಂಜಯ್ಯ ಮಾಸ್ತರ್' ಮಕ್ಕಳ ಕತೆ ಶಿಕ್ಷಣ ಇಲಾಖೆಯಿಂದ ಪಠ್ಯ ಪೂರಕ ಕಥಾ ಪುಸ್ತಕವಾಗಿದೆ.


ಅವರು ಕರ್ತವ್ಯ ನಿರ್ವಹಿಸುವ ಶಾಲೆಗೆ ಕ್ಲಸ್ಟರ್ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ, ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ್ದ ಪರಿಸರ ಮಿತ್ರ ಶಾಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ, ಹಳದಿ ಶಾಲೆ ಪ್ರಶಸ್ತಿ, ಶಾಲಾ ವಾರ್ಷಿಕ ಸಂಚಿಕೆಗೆ ಪ್ರಶಸ್ತಿ ಬಂದಿವೆ.


ಮಕ್ಕಳ ಕವನ ರಚನಾ ಶಿಬಿರ, ಬೇಸಿಗೆ ರಜಾ ಶಿಬಿರ, ಸಂಘಸಂಸ್ಥೆಗಳು ಏರ್ಪಡಿಸುವ ಅನೇಕ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿದ್ದಾರೆ.