ವಂದೇ ಮಾತರಂ ಗೀತೆಗೆ ರಾಷ್ಟ್ರ ಮಟ್ಟದ ಪ್ರಮುಖ್ಯತೆ ಸಂತಸದಾಯಕ

ಲೋಕಬಂಧು ನ್ಯೂಸ್ ಉಡುಪಿ, ಜು.15
ವಂದೇ ಮಾತರಂ ದೇಶದಲ್ಲಿ ನಡೆದು ಬಂದ ಕ್ಷಣಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ವಂದೇ ಮಾತರಂಗೆ ರಾಷ್ಟ್ರಗೀತೆಗೆ ಸಮನಾದ ಪ್ರಾಮುಖ್ಯತೆ ಲಭಿಸಿರುವುದು ಸಂತೋಷದಾಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೇತೃತ್ವದಲ್ಲಿ ರಾಷ್ಟ್ರದಾದ್ಯಂತ‌ ಆಯೋಜಿಸಲಾಗಿರುವ ವಂದೇ ಮಾತರಂ 150ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಂದರ್ಭದಲ್ಲಿ ಕವಿ ಚಕ್ರವರ್ತಿ ಕಾಳಿದಾಸ ಜಯಂತಿ ಅಂಗವಾಗಿ ಬುಧವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಸಹಯೋಗದೊಂದಿಗೆ ನಡೆದ ಯುವ ರಂಗೋತ್ಸವ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸಂಪೂರ್ಣ ದೇಶ ವಂದೇ ಮಾತರಂಗೆ ತೆರೆದುಕೊಂಡಿದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬಾರದು ಎಂಬ ಬಗ್ಗೆ ಚರ್ಚೆಯೂ ನಡೆದಿತ್ತು. ಇದೀಗ ದೇಶಾದ್ಯಂತ ಸುಮಾರು 20 ಲಕ್ಷ ಮಂದಿ ಸೇರುವ 4 ಸಾವಿರ ಕಲಾವಿದರ ಭಾಗವಹಿಸುವಿಕೆಯಲ್ಲಿ ಈ ಕಾರ್ಯಕ್ರಮ ಏಕಕಾಲದಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ ಈ ಕಾರ್ಯಕ್ರಮ  ರಂಗಭೂಮಿ ಉಡುಪಿ ನೇತೃತ್ವದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.


ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆ  ಬಗ್ಗೆ ಅರಿವು ಮೂಡಿಸಲು ರಂಗಭೂಮಿ ಉಡುಪಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇದು ಇಂದಿನ ಅಗತ್ಯತೆಯಾಗಿದೆ ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ, ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ  ಪ್ರಮುಖ ಪಾತ್ರವಹಿಸಿದೆ ಎಂದರು.

ವಂದೇ ಮಾತರಂ ಬಗ್ಗೆ ಮಾತನಾಡಿದ ಪ್ರೊ. ಪವನ್ ಕಿರಣಕೆರೆ, ಭಾರತೀಯ ರಂಗಭೂಮಿ ಮೂಲಕ ದೇಶಪ್ರೇಮ, ಸಂಸ್ಕೃತಿ ಪ್ರೀತಿ ಬೆಸೆಯುವ ಸಲುವಾಗಿ ಭಾರತದಾದ್ಯಂತ 150 ರಂಗ ಪ್ರಯೋಗ ಆಯೋಜನೆಗೊಂಡಿದೆ. ಭಾರತೀಯ ರಂಗಭೂಮಿ ಮತ್ತು ಸಾಹಿತ್ಯಕ್ಕೆ ಭಾರತೀಯ ದರ್ಶನ ಕಾಣಿಕೆ ನೀಡಿರುವ ಕಾಳಿದಾಸನ ಜಯಂತಿಯೂ ಇದರಲ್ಲಿ ಸೇರ್ಪಡೆಗೊಂಡಿದೆ. 39ಕ್ಕೂ ಹೆಚ್ಚು ಭಾಷೆ, ಉಪಭಾಷೆಗಳಲ್ಲಿ ರಂಗ ಸಾಧ್ಯತೆ ತೆರೆದುಕೊಳ್ಳಲಿದೆ. ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಒಂದು ದೇಶ ಒಂದು ಆಚರಣೆ ಎಂಬ ಭಾವೈಕ್ಯ ಸಾರಲು ಈ ರಂಗಮಹೋತ್ಸವ ಸಜ್ಜಾಗಿದೆ. 4 ಸಾವಿರ ರಂಗಕರ್ಮಿಗಳು ಪಾಲ್ಗೊಳ್ಳುತ್ತಿರುವ ಈ ಮಹೋತ್ಸವದಲ್ಲಿ ದೇಶಾದ್ಯಂತ 150ಕ್ಕೂ ಅಧಿಕ ಸಂಘಸಂಸ್ಥೆಗಳ ಸಹಭಾಗಿತ್ವ ಇದೆ ಎಂದರು.


ಮಹಾಕವಿ ಕಾಳಿದಾಸ ಜಯಂತಿ ಬಗ್ಗೆ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಹಾಗೂ ಶಿಕ್ಷಕ ಜಿ.ಪಿ.ಪ್ರಭಾಕರ್ ತುಮರಿ ಮಾತನಾಡಿದರು.

ಶಾಸಕರಾದ ಯಶಪಾಲ್  ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ ಗಂಟಿಹೊಳೆ, ಅಂಬಲಪಾಡಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ. ನಿ.ಬೀ.ವಿಜಯ ಬಳ್ಳಾಲ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ತೊ. ಗಾಯತ್ರಿ ಗಿರಿಧರ್ ಪೈ , ಪ್ರೊ.ದೇವಿದಾಸ ನಾಯಕ್, ಪ್ರೊ.ವಿಶ್ವನಾಥ ಪೈ, ಮಾಲತಿದೇವಿ, ರಂಗಭೂಮಿ‌ ಉಡುಪಿ ಪದಾಧಿಕಾರಿಗಳು, ಜಿಲ್ಲೆಯ ರಂಗತಂಡಗಳು‌ ಮತ್ತು ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಯುವ ರಂಗೋತ್ಸವ ಕಾರ್ಯಕ್ರಮದಡಿ 'ಸ್ವಾತಂತ್ರ್ಯ ಶರಧಿ' ನಾಟಕ ಪ್ರಸ್ತುತಗೊಂಡಿತು.