ಆಗುಂಬೆ ಸುರಂಗ ಮಾರ್ಗ ಅಂತಿಮ ನಿರ್ಧಾರ ಆಗಿಲ್ಲ

ಲೋಕಬಂಧು ನ್ಯೂಸ್ ಹೆಬ್ರಿ, ಜು.15
ಆಗುಂಬೆ ಘಾಟ್ ಸುರಂಗ ಮಾರ್ಗ ನಿರ್ಮಾಣ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಬುಧವಾರ ಅವರು ಉಡುಪಿ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಕಾಮಗಾರಿ  ವೀಕ್ಷಿಸಿದರು.
ಆಗುಂಬೆ ಘಾಟಿಯ ಸೂರ್ಯಾಸ್ತ ವೀಕ್ಷಣೆ ಸ್ಥಳದಿಂದ ಘಾಟಿಯಲ್ಲಿ ಕಾಮಗಾರಿಗಳ ಸಾಧ್ಯಾಸಾಧ್ಯತೆ ಬಗ್ಗೆ ಇಲಾಖೆ ಅಧಿಕಾರಿಗಳ ಜೊತೆ ಪರಿವೀಕ್ಷಣೆ ನಡೆಸಿದರು.
ಘಾಟಿಯ ಕೆಲವೊಂದು ಸುತ್ತುಗಳು ಭಾರಿ ತಿರುವುಗಳಿಂದ ಕೂಡಿದ್ದು ಅದನ್ನು ಸರಳಗೊಳಿಸಿ ಘನ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಯೋಚಿಸಲಾಗುವುದು ಎಂದರು.


ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಆಗುಂಬೆ ಘಾಟಿಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಮುಖ್ಯವಾಗಿ ಮಣಿಪಾಲ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಲು ಈ ಮಾರ್ಗ ಅತ್ಯಂತ ಉಪಯುಕ್ತವಾಗಿದೆ. ಆದಷ್ಟು ಶೀಘ್ರ ಈ ರಸ್ತೆಯನ್ನು ಅಗಲಗೊಳಿಸುವ ಕಾರ್ಯ ಆಗಬೇಕು ಎಂದು ಕಾಂಗ್ರೆಸ್ ಮುಂದಾಳು ಮುನಿಯಾಲು ಉದಯ ಶೆಟ್ಟಿ ಸಚಿವರಲ್ಲಿ ಮನವಿ ಮಾಡಿದರು.


ನಾರಾಯಣ ಗುರು ಅಭಿವೃದ್ಧಿ ನಿಗಮ‌ ಅಧ್ಯಕ್ಷ ಮಂಜುನಾಥ ಪೂಜಾರಿ ಮೊದಲಾದವರಿದ್ದರು.