ಪೇಪರ್ ಲೀಕ್ ಮಸೂದೆ ಪಾಸ್

ಲೋಕಬಂಧು ನ್ಯೂಸ್ | ನವದೆಹಲಿ, ಜು.31
ಜಿರಳೆ ಗುಂಪಿನ ಹೋರಾಟಕ್ಕೆ ಮಣಿದು ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ 2026 ಮಸೂದೆ ಸತತ 3 ದಿನಗಳ ಬಳಿಕ ಗದ್ದಲದ ನಡುವೆ  ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರವಾಯಿತು.
ಪರೀಕ್ಷಾ ಅಕ್ರಮ ತಡೆಗಟ್ಟಲು 10 ವರ್ಷದ ವರೆಗೆ ಶಿಕ್ಷೆ ಹಾಗೂ 50 ಲಕ್ಷ ರೂ.ವರೆಗೆ ದಂಡ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.


ಪ್ರತಿಪಕ್ಷಗಳ ಘೋಷಣೆ ಮತ್ತು ಪೊಲೀಸ್ ಕ್ರಮದ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ಎನ್‌ಡಿಎ ಸದಸ್ಯರ ಆಕ್ಷೇಪದ ನಡುವೆ ಧ್ವನಿಮತದ ಅನುಮೋದನೆ ದೊರೆತಿದೆ ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಘೋಷಿಸಿದರು.


ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ನಡೆಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.


ಮಸೂದೆ ಕುರಿತ ಚರ್ಚೆಗೂ ಮುನ್ನ ವಿದ್ಯಾರ್ಥಿಗಳ ಮೇಲೆ ನಡೆದಿರುವ ಬಲವಂತದ ಪ್ರಯೋಗದ ಕುರಿತು ಚರ್ಚೆಯಾಗಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದಿತ್ತಾದರೂ, ನಂತರ ಮಣಿದು ಚರ್ಚೆಗೆ ಒಪ್ಪಿಕೊಂಡಿ ದ್ದವು. ಎರಡು ದಿನಗಳ ಸುದೀರ್ಘ ಚರ್ಚೆಯ ನಂತರ ಬುಧವಾರ ಒಪ್ಪಿಗೆ ದೊರೆತಿದೆ. ರಾಜ್ಯಸಭೆಯಲ್ಲಿ ಮಂಡನೆಯಾದ ಬಳಿಕ ಕಾಯ್ದೆಯಾಗಿ ಜಾರಿಗೆ ಬರಲಿದೆ.


ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ, ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ 3 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ಪ್ರಕರಣದ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮಸೂದೆಯಲ್ಲಿದೆ.


ಹಳೆ ಕಾಯ್ದೆ
ಹಳೆ ಕಾಯ್ದೆಯಲ್ಲಿ ಕನಿಷ್ಟ 3ರಿಂದ 5 ವರ್ಷ ಜೈಲು ಶಿಕ್ಷೆ ನೀಡಲಾಗುತ್ತಿತ್ತು. ಅಪರಾಧಿಗೆ ಗರಿಷ್ಠ 10 ಲಕ್ಷ ರೂ. ದಂಡ ಹಾಕಲಾಗುತ್ತಿತ್ತು. ಸಂಘಟಿತ ಅಪರಾಧಕ್ಕೆ ಯಾವುದೇ ದಂಡ ಇಲ್ಲ,ತನಿಖಾ ಕಾಲಮಿತಿ ಇಲ್ಲ. ಸಾಮಾನ್ಯ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿತ್ತು.


ಹೊಸ ಕಾಯ್ದೆ
ಹೊಸ ಕಾಯ್ದೆಯಲ್ಲಿ ಕನಿಷ್ಟ 5ರಿಂದ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧಿಗೆ ಗರಿಷ್ಟ 10 ಕೋ.ರೂ. ದಂಡ, ಸಂಘಟಿತ ಅಪರಾಧಕ್ಕೆ 10 ಕೋಟಿ ರೂ. ಭಾರಿ ದಂಡ. ಕೇವಲ 60 ದಿನಗಳಲ್ಲಿ ತನಿಖೆ ಮುಗಿಸಬೇಕು, ವಿಶೇಷ ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಯಾಗಬೇಕು ಎಂದಿದೆ.