ದೆಹಲಿಯಲ್ಲಿ ಪೇಜಾವರ ಶ್ರೀಪಾದರ ಚಾತುರ್ಮಾಸ್ಯ ಸಕಾಲಿಕ

ಲೋಕಬಂಧು ನ್ಯೂಸ್ | ನವದೆಹಲಿ, ಜು.30
ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಪ್ರಸಿದ್ಧವಾಗಿರುವ ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಈ ಬಾರಿ ಶ್ರೀಕೃಷ್ಣ ಮತ್ತು ಆಚಾರ್ಯ ಮಧ್ವರ ಭಕ್ತಿ ಸಂದೇಶ ಪ್ರಚುರಗೊಳಿಸಲು ದೇಶದ ರಾಜಧಾನಿ ದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ಹಮ್ಮಿಕೊಂಡಿರುವುದು ಅತ್ಯಂತ ಸಕಾಲಿಕ ಎಂದು ಕೇಂದ್ರ ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶ್ರೀಗಳ 39ನೇ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಜೋಶಿ ಅವರು ಇಲ್ಲಿನ ವಸಂತ್ ಕುಂಜ್'ನಲ್ಲಿರುವ ಶ್ರೀಮಠದ ಶಾಖೆ ವೇದವ್ಯಾಸ ಗುರುಕುಲ- ಶ್ರೀಕೃಷ್ಣ ಧಾಮದಲ್ಲಿ ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಭಾಗವಹಿಸಿ ಚಾತುರ್ಮಾಸ್ಯ ಸತ್ರ ಉದ್ಘಾಟಿಸಿ ಮಾತನಾಡಿದರು.
ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ತಮ್ಮ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಅತ್ಯಂತ ಶ್ರಮಪೂರ್ವಕ ಪಾಲಿಸುತ್ತಲೇ ದೇಶಾದ್ಯಂತ ಸಂಚರಿಸಿ ಧರ್ಮಮಾರ್ಗದಲ್ಲಿ ನಡೆಯಲು ಜನತೆಗೆ ನೀಡಿದ ಪ್ರೇರಣೆ, ಪ್ರೋತ್ಸಾಹ ಹಾಗೂ ಹಿಂದೂ ಸಮಾಜವನ್ನು ಸಂಘಟಿಸುವಲ್ಲಿ ನೀಡಿದ ಮಾರ್ಗದರ್ಶನ ಹಾಗೂ ಕೈಗೊಂಡ ಕಾರ್ಯಗಳಿಂದಾಗಿ ಇಡೀ ಸಂತ ಕುಲಕ್ಕೇ ಆದರ್ಶರೆನಿಸಿದ್ದರು.


ಅವರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೂ ಅದೇ ದಾರಿಯಲ್ಲಿ ಮುನ್ನಡೆಯುತ್ತಾ ಮಠದ ವತಿಯಿಂದ ಬಹಳಷ್ಟು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ದಿವ್ಯ ಸಂದೇಶ ನೀಡುತ್ತಿದ್ದಾರೆ. ಈ ಬಾರಿಯ ಚಾತುರ್ಮಾಸ್ಯದಿಂದ ಸಮಸ್ತ ದೆಹಲಿಯ ಜನರಿಗೂ ಅವರ ದಿವ್ಯಾಶೀರ್ವಾದ ಲಭಿಸುತ್ತಿರುವುದು ಅತ್ಯಂತ ಅಭಿನಂದನೀಯ ಎಂದರು.


ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷ ಹಾಗೂ ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಅಲೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.


ಉಡುಪಿ- ಚಿಕ್ಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೆಹಲಿ ಮೇಯರ್ ಪರ್ವೇಶ್ ವಾಹಿ, ಮಾಜಿ ಸಂಸದ ರಮೇಶ್ ಬಿಧೂರಿ ಉಪಸ್ಥಿತರಿದ್ದರು.


ಅನುಗ್ರಹ ಸಂದೇಶ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರಾಮರಾಜ್ಯ ನಿರ್ಮಾಣದೆಡೆಗಿನ ತಮ್ಮ ಕಲ್ಪನೆಯನ್ನು ವಿವರಿಸಿ, ಇಡೀ ಸಮಾಜ ಅದರಲ್ಲಿ ಸಕ್ರಿಯವಾಗುವಂತೆ ಕರೆ ನೀಡಿದರು.


ಚಾತುರ್ಮಾಸ್ಯದ ಅವಧಿಯಲ್ಲಿ ದೆಹಲಿಯಲ್ಲಿ ಶ್ರೀಮಠದ ಕೆಲವು ಕಾರ್ಯಚಟುವಟಿಕೆಗಳನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿ, ಎಲ್ಲರ ಸಹಕಾರ ಕೋರಿದರು.


ಹಿರಿಯ ವಿದ್ವಾಂಸ ಡಾ.ವೀರನಾರಾಯಣ ಪಾಂಡುರಂಗಿ, ಬ್ರಹ್ಮೋಸ್ ನಿರ್ದೇಶಕ ಪ್ರೊ.ಜಯತೀರ್ಥ ಜೋಶಿ, ವೇದವ್ಯಾಸ ಗುರುಕುಲ ನಿರ್ದೇಶಕ ಡಾ.ವಿಠೋಬಾಚಾರ್ಯ ಮೊದಲಾದವರಿದ್ದರು.


ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರೀಯ ಸಂಸ್ಕೃತ ವಿ.ವಿ. ಉಪಕುಲಪತಿ ಡಾ.ಶ್ರೀನಿವಾಸ ವರಖೇಡಿ ಪ್ರಸ್ತಾವನೆಗೈದರು. ಸಮಿತಿ ಸದಸ್ಯ, ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಸುಬೋಧ್ ಚಂದ್ರ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ, ಅಶ್ವಿನ್ ಕಕ್ರಣ್ಣಾಯ, ಕೃಷ್ಣಮೂರ್ತಿ ಭಟ್, ಮಹಾನಿಧಿ ಆಚಾರ್ಯ ಮೊದಲಾದವರು ಸಹಕರಿಸಿದರು.


ಹಿರಿಯ ವಿದ್ವಾಂಸ ತಿರುಮಲ ಕುಲಕರ್ಣಿ ಆಚಾರ್ಯ ಅನುವಾದಿಸಿದ ಆಚಾರ್ಯ ಮಧ್ವರ ಜೀವನ ಚರಿತ್ರೆಯ ಹಿಂದಿ ಅವತರಣಿಕೆಯನ್ನು ಪ್ರಹ್ಲಾದ ಜೋಶಿ ಬಿಡುಗಡೆಗೊಳಿಸಿದರು.


ಮಠದ ನವೀಕರಣ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್'ಗಳಾದ ಸಂತೋಷ್ ಬೆಂಗಳೂರು ಮತ್ತು ರಿಶಿರಾಜ್ ದೆಹಲಿ ಅವರನ್ನು ಶ್ರೀಗಳು ಸಂಮಾನಿಸಿದರು.


ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಸಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಶೋಭಾಯಾತ್ರೆ ಮೂಲಕ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು. ಗುರುಪೂರ್ಣಿಮೆ ನಿಮಿತ್ತ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾದುಕೆಗಳಿಗೆ ಪುಷ್ಪಾರ್ಚನೆ ಹಾಗೂ ಗೋಪೂಜೆ ನೆರವೇರಿತು. ಪ್ರಧಾನಿ ಮೋದಿ ಆಶಯದ `ಏಕ್ ಪೇಡ್ ಮಾ ಕೇ ನಾಮ್' (ತಾಯಿಯ ಹೆಸರಲ್ಲಿ ಒಂದು ಸಸಿ) ಕರೆಯಂತೆ ಶ್ರೀಗಳು ಮಂದಿರದ ಆವರಣದಲ್ಲಿ ಸಸಿ ನೆಡಲಾಯಿತು. ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಚಿವ ಜೋಶಿ ಅವರನ್ನು ಶ್ರೀಗಳು ಗೌರವಿಸಿದರು.