ಸಾಹಿತ್ಯದ ಕಾಲಘಟ್ಟ ಯಾವುದೇ ಇರಲಿ, ಓದಿನಲ್ಲಿ ಆತ್ಮವಿಶ್ವಾಸವಿರಲಿ

ಲೋಕಬಂಧು ನ್ಯೂಸ್ | ಮಲ್ಪೆ, ಜು.5
ಸಾಹಿತ್ಯದ ಕಾಲಘಟ್ಟ ಯಾವುದೇ ಆಗಿರಲಿ ಅದನ್ನು ಓದುವಾಗ ಆತ್ಮವಿಶ್ವಾಸ ಅಗತ್ಯ. ಓದುವಿಕೆ ಗಟ್ಟಿ ಧ್ವನಿಯಲ್ಲಿ ಆದಾಗ ಮಾತ್ರ ಸ್ವರಭಾರಗಳು ಮಿಳಿತಗೊಂಡು ಮಾಡುವ ತಪ್ಪುಗಳು ಗೋಚರವಾಗುತ್ತದೆ ಎಂದು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪಿ.ಬಿ. ಪ್ರಸನ್ನ ಹೇಳಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಆಶ್ರಯಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಕಬ್ಬದುಳುಮೆ ಕಾರ್ಯಕ್ರಮದ ಸಮಾರೋಪ ಹಾಗೂ ದ್ವಿತೀಯ ಎಂ.ಎ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಭಾಷಾ ಕಲಿಕೆ ಸಂದರ್ಭದಲ್ಲಿ ಶಿಕ್ಷಕ- ವಿದ್ಯಾರ್ಥಿಗಳಿಬ್ಬರಿಗೂ ಭಾಷೆಯ ಅರಿವಿನ ಅಗತ್ಯವಿದೆ. ಭಾಷಾಧ್ಯಾಪಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಹಳಗನ್ನಡ ಕಾವ್ಯದ ಓದಿನ ಸಂದರ್ಭದಲ್ಲಂತೂ ಭಾವಗಳು ಸೇರದಿದ್ದಾಗ ಓದು ನೀರಸವಾಗುತ್ತದೆ. ಪದಗಳ ಒಡೆಯುವಿಕೆ ಮುಖ್ಯವಾಗಿದ್ದು, ಎಚ್ಚರಿಕೆ ತಪ್ಪಿದಲ್ಲಿ ಅನರ್ಥ ಸಂಭವಿಸುತ್ತದೆ.


ಕಾವ್ಯದ ಓದಿನ ಸಂದರ್ಭದಲ್ಲಿ ಅದಕ್ಕೆ ಬೇಕಾದ ಭಾವ, ಛಂದಸ್ಸು, ಸರಿಯಾಗಿ ಅಚ್ಚೊತ್ತಿದ ರೀತಿಯಲ್ಲಿ ಪ್ರಕಟವಾದಾಗ ಪರಿಣಾಮಕಾರಿ ಓದು ಸಾಧ್ಯ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.


ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಸುಶ್ಮಿತಾ ಶೆಟ್ಟಿ, ಕೃಷ್ಣ, ರಕ್ಷಿತಾ, ಜ್ಯೋತಿ‌ ಮತ್ತು ಪ್ರವೀಣ್ ಕಬ್ಬದುಳುಮೆ ಕಾರ್ಯಕ್ರಮದ ಕುರಿತು ಮಾತನಾಡಿದರು.


ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.


ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್, ಐ.ಕ್ಯೂ.ಎ.ಸಿ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಉಪನ್ಯಾಸಕಿಯರಾದ ಸಂಧ್ಯಾರಾಣಿ, ಲತಾ ನಾಯ್ಕ್, ಭವ್ಯ ರೈ‌ ಮತ್ತು ಶಾಲಿನಿ ಯು.ಬಿ ಉಪಸ್ಥಿತರಿದ್ದರು.


ಕನ್ನಡ ವಿಭಾಗ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಅರ್ಚನಾ ವಂದಿಸಿದರು. ಭಾರತಿ ವರದಿ ಮಂಡಿಸಿದರು. ಶರಿತಾ ನಿರೂಪಿಸಿದರು.