ತೋಡಿನಲ್ಲಿ ಬಿದ್ದ ಯುವಕನ ರಕ್ಷಣೆ

ಲೋಕಬಂಧು ನ್ಯೂಸ್ ಉಡುಪಿ, ಜು.17
ಪೇಜಾವರ ಮಠದ ಹಿಂಬದಿಯ ಮಳೆ ನೀರು ಹರಿಯುವ ತೋಡಿನಲ್ಲಿ ಬಿದ್ದು, ಎದ್ದೇಳಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಯುವಕನೋರ್ವನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿರುವ ಘಟನೆ ಶುಕ್ರವಾರ ನಡೆದಿದೆ.ಯುವಕ ರಸ್ತೆಯಲ್ಲಿ ನಡೆಯುತ್ತಿದ್ದಾಗ ಆಯತಪ್ಪಿ, ಕೊಳಚೆ ಚರಂಡಿಗೆ ಬಿದ್ದು ಮೇಲೇಳಲಾಗದ ಸ್ಥಿತಿಯಲ್ಲಿ ಬೊಬ್ಬೆ ಹಾಕಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಧಾವಿಸಿದ ನಿತ್ಯಾನಂದ ಒಳಕಾಡು ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು.


ಯುವಕ ಅಪಾಯದಿಂದ ಪಾರಾಗಿದ್ದು, ಆತ ಮಲ್ಪೆ ಬಂದರು ಪ್ರದೇಶದಲ್ಲಿ ದುಡಿಯುವ ಕಾರ್ಮಿಕನಾಗಿದ್ದ ಎಂದು ತಿಳಿದುಬಂದಿದೆ.


ಒಳಕಾಡು ಅವರು ಯುವಕನಿಗೆ ಬದಲಿ ಬಟ್ಟೆ ತೊಡಿಸಿ, ಮಲ್ಪೆಗೆ ಕಳಿಸಿದರು.