ನಿಯಮಿತ ಸಾಧನೆಗೆ ಸಾತ್ವಿಕ ವಾತಾವರಣ ಅಗತ್ಯ

ಲೋಕಬಂಧು ನ್ಯೂಸ್ | ಉಡುಪಿ, ಜು.31
ನಿಯಮಿತ ಸಾಧನೆಗೆ ಸಾತ್ವಿಕ ವಾತಾವರಣದ ಅಗತ್ಯವಿದ್ದು ಪರಿಶುದ್ಧ ಮನಸ್ಸು ಹಾಗೂ ಸಾತ್ವಿಕರ ಒಡನಾಟ ಅದಕ್ಕೆ ಪೂರಕ. ಅಂಥ ಪವಿತ್ರ ವಾತಾವರಣವನ್ನು ಪಡೆಯಲು ದೇವಸ್ಥಾನಗಳಿಗೆ ತೆರಳುವುದು ಅತ್ಯಂತ ಸೂಕ್ತ ಮತ್ತು ಮಹತ್ವದ್ದಾಗಿದೆ ಎಂದು ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ‌ ಶ್ರೀ ರಮಾನಂದ ಗುರೂಜಿ ಹೇಳಿದರು.
ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ನಗರದ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ನಡೆದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅವು ನೇರವಾಗಿ ನಮ್ಮ ಮನೆ ಬಾಗಿಲಿಗೆ ಬಂದು ತಲುಪಿವೆ. ಭಯೋತ್ಪಾದನೆ ಮತ್ತು ನುಸುಳುವಿಕೆಯೊಂದಿಗೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಕಾರ್ಪೊರೇಟ್ ಜಿಹಾದ್ ಇತ್ಯಾದಿಗಳು ಹಿಂದೂಗಳನ್ನು ಗುರಿಯಾಗಿಸಿಕೊಂಡು ಆಯೋಜಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಕೇವಲ ಮೂಕಪ್ರೇಕ್ಷಕರಾಗಿರದೆ ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಅಶ್ವಿನಿ ನಾಯಕ್ ಹೇಳಿದರು.
ಆರಂಭದಲ್ಲಿ ವ್ಯಾಸಪೂಜೆ ಮತ್ತು ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಡಾ.ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ಪ್ರತ್ಯಕ್ಷ ಪ್ರದರ್ಶನ, ಡಾ.ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ ಪ್ರದರ್ಶಿಸಲಾಯಿತು.


ಕಾರ್ಕಳದಲ್ಲಿ
ಕಾರ್ಕಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಉದ್ಯಮಿ ರಾಜೇಂದ್ರ ಕುಮಾರ್ ಜೈನ್ ಭಾಗವಹಿಸಿ, ಹಿಂದೂ ಧರ್ಮದ ಮೇಲಿನ‌ ಆಘಾತಗಳನ್ನು ಸಂಘಟಿತರಾಗಿ ಎದುರಿಸಬೇಕು ಎಂದರು.
ದೇಶಾದ್ಯಂತ 64 ಸ್ಥಳಗಳಲ್ಲಿ 'ಗುರು ಪೂರ್ಣಿಮಾ ಮಹೋತ್ಸವ' ಆಯೋಜಿಸಲಾಯಿತು‌.