ಲೋಕಬಂಧು ನ್ಯೂಸ್ ಲಖನೌ, ಜು.6
ಶ್ರೀರಾಮನ ದುಡ್ಡು ಹೊಡೆದದ್ದು ತೀವ್ರ ನೋವುಂಟುಮಾಡಿದೆ ಎಂದು ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಖೇದ ವ್ಯಕ್ತಪಡಿಸಿದ್ದಾರೆ.ಈ ಪಾಪ ಕೃತ್ಯದಲ್ಲಿ ಭಾಗಿಯಾದವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಶಿಕ್ಷೆ ವಿಧಿಸುತ್ತಾರೆ ಎಂದವರು ಆಶಿಸಿದ್ದಾರೆ.
ಅಲ್ಲದೆ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ಇದು ಲಕ್ಷಾಂತರ ಹಿಂದೂಗಳ ನಂಬಿಕೆಗೆ ಸಂಬಂಧಿಸಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಮಜನ್ಮ ಭೂಮಿ ಸಂಕೀರ್ಣದೊಳಗಿನ ಅತಿಥಿಗೃಹದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಚಂಪತ್ ರಾಯ್ ರಾಜೀನಾಮೆ ಅಂಗೀಕಾರದ ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿವೃತ್ತ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಕೃಷ್ಣ ಮೋಹನ್ ಅವರನ್ನು ನೇಮಿಸಲಾಗಿದೆ. ಅಯೋಧ್ಯೆ ರಾಮ ಮಂದಿರದ ಮೇಲ್ವಿಚಾರಣೆಯ ದೈನಂದಿನ ಆಡಳಿತವನ್ನು ಅವರಿಗೆ ವಹಿಸಲಾಗಿದೆ.
ಜೊತೆಗೆ, ಟ್ರಸ್ಟ್ ತನ್ನ ಕಾರ್ಯನಿರ್ವಹಣೆಯನ್ನು ಬಲಪಡಿಸುವ ಮತ್ತು ವಿವಾದದ ಪರಿಣಾಮಗಳನ್ನು ಪರಿಹರಿಸುವ ಗುರಿ ಹೊಂದಿರುವ ಸಮಗ್ರ ಆಡಳಿತಾತ್ಮಕ ಪರಿಶೀಲನೆಯನ್ನೂ ಘೋಷಿಸಿದೆ.
ಟ್ರಸ್ಟ್ ಸದಸ್ಯರ ಸರ್ವಾನುಮತದ ನಿರ್ಧಾರದ ಮೂಲಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೃಷ್ಣ ಮೋಹನ್ ಅವರು ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯ ಶಹಾಬಾದ್ ವಿಧಾನಸಭಾ ಕ್ಷೇತ್ರದ ಚಂದ್ರಾಪುರ ಗ್ರಾಮದವರು.