ಯಶಪಾಲ್ ಹೇಳಿಕೆಗೆ ಮಹತ್ವ ನೀಡುವ ಅಗತ್ಯ ಇಲ್ಲ

ಲೋಕಬಂಧು ನ್ಯೂಸ್ | ಮಂಗಳೂರು, ಜು.31
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ಹೇಳಿಕೆಗೆ ಮಹತ್ವ ನೀಡುವ ಅಗತ್ಯ ಇಲ್ಲ. ಅವರು ರಾಹುಲ್ ಗಾಂಧಿ ಅವರ ಕಾಲಿನ ಕಿರುಬೆರಳಿಗೂ ಸಮವಲ್ಲ. ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅವರು ಇಂಥ ಹೇಳಿಕೆ ನೀಡಿದ್ದಾರೆ. ಅಂಥ ಹೇಳಿಕೆ ನೀಡುವವರದು ತಾಲಿಬಾನ್ ಡಿಎನ್‌ಎ ಇದ್ದಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದ‌ರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರಾವಳಿ ಜನರ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಕುರಿತು ಬೇರೆ ಕಡೆ ವಿಶೇಷ ಗೌರವ ಇದೆ. ಕೆ.ಕೆ.ಶೆಟ್ಟಿ, ಎನ್.ಯೋಗೀಶ್ ಭಟ್ ಅವರಂಥ ಇಲ್ಲಿನ ನಾಯಕರು ಸಭ್ಯತೆಗೆ ಹೆಸರಾಗಿದ್ದರು. ಈಗಿನ ಕೆಲವು ಶಾಸಕರ ಇಂಥ ಹೇಳಿಕೆಗಳು ಕರಾವಳಿ ಸಂಸ್ಕೃತಿ, ಜನಪ್ರತಿನಿಧಿಗಳಿಗೆ ಇರುವ ಗೌರವಕ್ಕೆ ಕಪ್ಪು ಚುಕ್ಕೆ. ತುಳುನಾಡಿಗಿರುವ ಗೌರವ ಉಳಿಸಿಕೊಂಡು ಹೋಗಬೇಕು ಎಂದರು.


ಯಶಪಾಲ್ ಅವರ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅವರ ಮನೆಯವರು, ಮಕ್ಕಳು ಕೂಡಾ ಒಪ್ಪಲಾರರು. ಗಾಂಧಿ ಕುಟುಂಬ ಈ ದೇಶದೊಂದಿಗೆ ಹೊಂದಿರುವ ನಂಟು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ.


ಇಂದಿರಾ ಗಾಂಧಿಯವರ ರಕ್ತ ಉತ್ತರ ಭಾರತದ ನೆಲದಲ್ಲಿದೆ. ರಾಜೀವ್ ಗಾಂಧಿಯವರ ರಕ್ತ ದಕ್ಷಿಣ ಭಾರತದ ನೆಲದಲ್ಲಿದೆ. ದೇಶದಲ್ಲಿ ಶಾಂತಿ ನೆಲೆಸಿದ್ದರೆ ಅದಕ್ಕೆ ಕಾಂಗ್ರೆಸ್‌ನ ಇಂಥ ನಾಯಕರ ಬಲಿದಾನವೂ ಕಾರಣ ಎಂದರು.