ಲೋಕಬಂಧು ನ್ಯೂಸ್ ಬೆಂಗಳೂರು, ಜು.6
ಅಯೋಧ್ಯೆಯ ರಾಮ ಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಣ ಮತ್ತು ಆಸ್ತಿಯನ್ನು ಲೂಟಿ ಮಾಡಲಾಗಿದ್ದು, ಈ ಲೂಟಿಯಲ್ಲಿ ಬಡವರು, ದಲಿತರು ಅಥವಾ ರೈತರು ಭಾಗಿಯಾಗಿಲ್ಲ, ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಖರ್ಗೆ, ರಾಮ ಮಂದಿರದ ದೇಣಿಗೆ ದುರ್ಬಳಕೆ ಬಗ್ಗೆ ಪ್ರಸ್ತಾಪಿಸಿದರು.
ಧರ್ಮದ ಹೆಸರು ಬಳಸಿಕೊಂಡು ಭ್ರಷ್ಟಾಚಾರ ನಡೆಸಲಾಗುತ್ತಿದೆ. ಪ್ರತಿದಿನ ದೇವರ ನಾಮ ಜಪಿಸುತ್ತಾರೆ. ಆದರೆ, ಅದೇ ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಾರೆ. ಇದು ಜನರನ್ನು ಮೋಸಗೊಳಿಸುವ ಕೆಲಸ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಗ್ರಾಮದಿಂದ ಗ್ರಾಮಕ್ಕೆ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ರಾಮನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರ ಬಳಿ ಹೋಗುವವರೇ ಈ ರೀತಿಯ ಲೂಟಿಯಲ್ಲಿ ತೊಡಗಿದ್ದಾರೆ. ಆದ್ದರಿಂದ ಜನರು ಜಾಗರೂಕರಾಗಿರಬೇಕು ಎಂದರು.
ಇದೇ ವೇಳೆ ಉತ್ತರ ಪ್ರದೇಶದಿಂದ ಬಂದಿರುವ ಮಾಹಿತಿಯನ್ನು ಉಲ್ಲೇಖಿಸಿದ ಖರ್ಗೆ, ರಾಮ ಮಂದಿರದ ಹೆಸರಿನಲ್ಲಿ ಸುಮಾರು 20 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಬೆಳ್ಳಿ ಇಟ್ಟಿಗೆಗಳನ್ನು ಲೂಟಿ ಮಾಡಲಾಗಿದೆ ಎಂಬ ಸುದ್ದಿಗಳು ಬರುತ್ತಿವೆ ಎಂದು ಆರೋಪಿಸಿದರು.