ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ವಿವೇಕ್ ಆಳ್ವ

ಲೋಕಬಂಧು ನ್ಯೂಸ್ | ಮೂಡುಬಿದಿರೆ, ಜು.5
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್  ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧ್ಯಾ ಶಿಫಾರಸಿನ ಮೇರೆಗೆ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ರಾಷ್ಟ್ರೀಯ ಆಯುಕ್ತ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಕೆ. ಖಂಡೇಲ್ವಾಲ್  ಅವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.


ಈ ನೇಮಕಾತಿ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರರಾಷ್ಟ್ರೀಯ ಸ್ನೇಹ ಸಂಬಂಧ ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.


ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವ ಅವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ರೂಪಿಸುವುದು, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ವಿನಿಮಯ ಯೋಜನೆ, ಸಾಂಸ್ಕೃತಿಕ ಜಂಬೂರಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯುವ ಸಂವಾದ ಹಾಗೂ ವಿಶ್ವ ಸ್ಕೌಟ್ಸ್– ಗೈಡ್ಸ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.


ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವೆ ಪರಸ್ಪರ ಗೌರವ, ರಾಷ್ಟ್ರೀಯ ಐಕ್ಯತೆ ಹಾಗೂ 'ವೈವಿಧ್ಯದಲ್ಲಿ ಏಕತೆ' ಎಂಬ ಭಾರತದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೂ ಅವರು ನಾಯಕತ್ವ  ವಹಿಸಲಿದ್ದಾರೆ. ಜೊತೆಗೆ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಕೌಟ್ಸ್ ಮತ್ತು ಗೈಡ್ಸ್'ಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸುವುದು, ಯುವಜನರಲ್ಲಿ ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನ ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದ್ದಾರೆ.


ವಿವೇಕ್ ಆಳ್ವ ಅವರು  ಹಲವು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ನಾಯಕತ್ವ ತರಬೇತಿ ಹಾಗೂ ವಿವಿಧ ರಾಷ್ಟ್ರ ಮಟ್ಟದ ಸ್ಕೌಟ್ಸ್–ಗೈಡ್ಸ್ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ಮೂಡುಬಿದಿರೆಯಲ್ಲಿ ನಡೆದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶಸ್ವಿ ಸಂಘಟನೆ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ.