ಲೋಕಬಂಧು ನ್ಯೂಸ್ ಉಡುಪಿ, ಜು.31
ಇಂದ್ರಾಳಿಯ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿ ಸಿಕ್ಕಿದ ಪಶ್ಚಿಮ ಬಂಗಾಳ ಮೂಲದ 11 ವರ್ಷದ ಬಾಲಕ ಪೋಷಕರ ಹೆಸರು, ವಿಳಾಸ ತಿಳಿಯದ ಕಾರಣ ಕಳೆದ ಜನವರಿಯಿಂದ ಕುಂಜಿಬೆಟ್ಟು ಬಾಲಕರ ಬಾಲಮಂದಿರದ ಆಶ್ರಯದಲ್ಲಿದ್ದ.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧೀಕ್ಷಕರು ಹಾಗೂ ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ ಧೀನಜಪುರ್ ಜಿಲ್ಲೆಯ ಗಂಗಾರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದಿಂದ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರು ಬಾಲಕನ ತಾಯಿ ಸಾಧನ ಮಂಡಲ್ ಪ್ರಸ್ತುತ ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ಟಿಟ್ವಾಲದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ಬಾಲಕನ ಇರುವಿಕೆ ಬಗ್ಗೆ ಮಾಹಿತಿ ತಿಳಿಸಿದರು.
ಅದರಂತೆ ಬಾಲಕನ ಪೋಷಕರು ಜು.30ರಂದು ಉಡುಪಿಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಸೂಕ್ತ ದಾಖಲಾತಿ ನೀಡಿ ಬಾಲಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು.
ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಕಾರ್ಯದಕ್ಷತೆಯನ್ನು ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಸಂಶಿಸಿದ್ದಾರೆ.