ಪ್ರಾಕೃತಿಕ ವಿಕೋಪ ಸಮನ್ವಯದಿಂದ ಎದುರಿಸಿ

ಲೋಕಬಂಧು ನ್ಯೂಸ್ | ಮಣಿಪಾಲ, ಜು.4
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನೆರೆ ಸಮಸ್ಯೆ ಉಂಟಾದಾಗ ಕೂಡಲೇ ಸ್ಪಂದಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಹಾನಿ ಹಾಗೂ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮುಂಬರುವ ದಿನಗಳಲ್ಲಿ ನೆರೆ, ಸಿಡಿಲು ಮತ್ತಿತರ ಅವಘಡಗಳುಂಟಾದಾಗ, ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓಗಳು ಸಂತ್ರಸ್ತರಿಗೆ ಸಾಂತ್ವನ ನೀಡಿ ಮಾನಸಿಕವಾಗಿ ಆತ್ಮವಿಶ್ವಾಸ ಮೂಡಿಸಿ ನಿಯಮಾನುಸಾರ ಸರಕಾರದಿಂದ ಸಿಗುವ ಪರಿಹಾರ ನೀಡಬೇಕು.


ಮಳೆ ಹಾನಿ ಮತ್ತಿತರ ಪ್ರಾಕೃತಿದ ವಿಕೋಪಗಳಿಂದ ತೊಂದರೆ ಉಂಟಾದಲ್ಲಿ ತುರ್ತಾಗಿ 5 ಸಾವಿರ ರೂ. ಪರಿಹಾರ ನೀಡಬೇಕು. ಮರಣ ಸಂಭವಿಸಿದಲ್ಲಿ 5 ಲಕ್ಷ, ಸಂಪೂರ್ಣ ಮನೆ ಹಾನಿಗೆ 1.20 ಲಕ್ಷ ಜೊತೆಗೆ ಹೆಚ್ಚುವರಿಯಾಗಿ ರಾಜೀವ ಗಾಂಧಿ ವಸತಿ ನಿಗಮದಿಂದ 3.75 ಲಕ್ಷ ರೂ. ಮೊತ್ತದ ಮನೆ ನಿರ್ಮಿಸಲು ಅನುಕೂಲ ಮಾಡಿಕೊಡಬೇಕು ಎಂದರು.


ಮಳೆಗಾಲ ಪ್ರಾರಂಭವಾಗಿದ್ದು ಶಾಲಾ ಕೊಠಡಿಗಳು ಸೋರುತ್ತಿದ್ದರೆ ಅಥವಾ ದುರಸ್ತಿಗೊಳಪಡದಿದ್ದರೆ ಅಂಥ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಖಾದರ್, ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ  ವಿತರಣೆ ಕುರಿತು ಮಾಹಿತಿ ಪಡೆದರು.
ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ದಾಸ್ತಾನು ಇಟ್ಟುಕೊಳ್ಳಬೇಕು. ಮಳೆಯಿಂದಾಗಿ ಜನ, ಜಾನುವಾರುಗಳ ಪ್ರಾಣ ಹಾನಿಯಾದಲ್ಲಿ ತ್ವರಿತವಾಗಿ ಪರಿಹಾರ ಮೊತ್ತ ವಿತರಿಸಬೇಕು.


ಮಳೆಗಾಲದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಂಭವವಿದ್ದು, ಆ ಕುರಿತು ಆರೋಗ್ಯ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೆಕು. ಜೊತೆಗೆ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣದ ಜಾಗೃತಿ ಮೂಡಿಸಬೇಕು.


ಸೊಳ್ಳೆ ಉತ್ಪಾದನಾ ಸ್ಥಳಗಳುಳ್ಳ ವಾಣಿಜ್ಯ ಸಂಸ್ಥೆಗಳ ಲೈಸನ್ಸ್ ರದ್ದು ಮಾಡಬೇಕು. ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾ ಉಲ್ಬಣಗೊಂಡ ಸ್ಥಳಗಳಲ್ಲಿ ಫಾಗಿಂಗ್ ಮತ್ತಿತರ ನಿಯಂತ್ರಣ ಕ್ರಮಗಳೊಂದಿಗೆ ಹತೋಟಿಗೆ ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಹೆಚ್ಚು ಮಾಡಬೇಕು ಎಂದರು.


ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾ ವಹಿಸಬೇಕು. ತೋಟಗಾರಿಕೆ ಬೆಳೆಗಳ ಕೀಟ ಬಾಧೆ ನಿಯಂತ್ರಣ ಕುರಿತು ರೈತರಿಗೆ ಅರಿವು ಮೂಡಿಸುವುದರೊಂದಿಗೆ ಹೆಚ್ಚು ರೈತರು ಬೆಳೆ ವಿಮೆ ಹೊಂದುವಂತೆ ಮಾಡಬೇಕು ಎಂದರು.


ಪ್ರ್ರಾಕೃತಿಕ ವಿಕೋಪಗಳಿಗೆ ಕೂಡಲೇ ಸ್ಪಂದಿಸಲು ಅರಣ್ಯ ಇಲಾಖೆ, ಮೆಸ್ಕಾಂ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮುಂದಿನ ಮೂರು ತಿಂಗಳೊಳಗೆ ಸಮನ್ವಯ ಸಮಿತಿ ರಚಿಸಬೇಕು. ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ತಂಡ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿರಬೇಕು.


ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡ, ರಸ್ತೆಯ ಎರಡೂ ಬದಿ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.


ಕಳ್ಳತನ, ಮನೆಗಳ್ಳತನ ಮಾದಕವಸ್ತು ನಿಯಂತ್ರಣ ಮತ್ತಿತರ ಅಪರಾಧಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದ ಸಚಿವ ಖಾದರ್, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಅಪರಾಧ ಪ್ರಕರಣ ಕಡಿಮೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ರುಥೇನ್ ಮೊದಲಾದವರಿದ್ದರು.