ಲೋಕಬಂಧು ನ್ಯೂಸ್ | ಉಡುಪಿ, ಜು.5
ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾಗಿದ್ದು, ಅದು ದೇವರು ಮೆಚ್ಚುವ ಕಾಯಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರ್ಶ ಚಾರಿಟೆಬಲ್ ಟ್ರಸ್ಟ್, ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ವೈದ್ಯರಿಗೆ ಸನ್ಮಾನ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಆಯೋಜಿಸಲಾದ ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಖಾಸಗಿ ಸಂಸ್ಥೆಗಳು ಮತ್ತು ಸರಕಾರಿ ಇಲಾಖೆಗಳು ಪರಸ್ಪರ ಕೈಜೋಡಿಸಿ ಸಮನ್ವಯದಿಂದ ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು. ವೈದ್ಯಕೀಯ ವೃತ್ತಿ ಸಮಾಜಸೇವೆಯೂ ಆಗಿದ್ದು, ಪೊಲೀಸ್ ಇಲಾಖೆ ಈ ಹಿಂದೆಯೂ ವೈದ್ಯರ ಸಹಕಾರದೊಂದಿಗೆ ವಿವಿಧೆಡೆ ಆರೋಗ್ಯ ಶಿಬಿರ ಆಯೋಜಿಸಿದೆ ಎಂದರು.
ಶಿಬಿರ ಉದ್ಘಾಟಿಸಿದ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಆರೋಗ್ಯ ಕ್ಷೇತ್ರದ ಸುಧಾರಣೆಯಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದ್ದು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ವೈದ್ಯರ ತಂಡವಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತಿದೆ. ಈ ಸೇವೆ ನಿರಂತರವಾಗಿ ಮುಂದುವರಿಸಬೇಕು.
ವೈದ್ಯಕೀಯ ಸೇವೆ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ನಿಯಮಗಳನ್ನು ಸರಳಗೊಳಿಸಬೇಕು ಎಂದರು.
ವೈದ್ಯರಿಗೆ ಸನ್ಮಾನ
ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞ ಡಾ.ಮೋಹನ್ ದಾಸ್ ಶೆಟ್ಟಿ, ಕಾರ್ಕಳ ಸಿಟೊ ನರ್ಸಿಂಗ್ ಹೋಮ್'ನ ಮೂಳೆ ಮತ್ತು ಕೀಲು ತಜ್ಞ ಡಾ.ರಿಜ್ವಾನ್ ಅಹ್ಮದ್, ಹೊನ್ನಾವರ ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಿಕ್ ಕುಮಾರ್ ಹೆಗ್ಡೆ, ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸವಿತಾ ಕುಂದರ್ ಮತ್ತು ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗಿರೀಶ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್., ಐಎಂಎ ಅಧ್ಯಕ್ಷ ಡಾ.ಅಶೋಕ್ ಕುಮಾರ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘ ಉಪಾಧ್ಯಕ್ಷ ವೆಲೆಂಟಿನ್ ಡಿ'ಸೋಜ ಅತಿಥಿಗಳಾಗಿದ್ದರು.
ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಹಾಸ್, ಸಿಇಓ ವಿಮಲಾ ಚಂದ್ರಶೇಖರ್ ವೇದಿಕೆಯಲ್ಲಿದ್ದರು.
ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಅನುಶ್ರೀ ನಿರೂಪಿಸಿದರು.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದ ಸಂಪೂರ್ಣ ಪರೀಕ್ಷೆ, ರಕ್ತದ ಸಕ್ಕರೆ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ, ಇಸಿಜಿ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು.

