ಲೋಕಬಂಧು ನ್ಯೂಸ್ | ಬ್ರಹ್ಮಾವರ, ಆ.2
ಅನಾರೋಗ್ಯಪೀಡಿತರಿಗೆ ಶುಶ್ರೂಷೆಗೆಂದು ನೇಮಿಸಿಕೊಂಡಿದ್ದ ಹೋಮ್ ಬ್ರದರ್, ರೋಗಿಯ ಬ್ಯಾಂಕ್ ಖಾತೆಯಿಂದ 1.60 ಲಕ್ಷ ರೂ. ಎಗರಿಸಿದ ಘಟನೆ ಬ್ರಹ್ಮಾವರ ಸೈಬರ್‌ಕಟ್ಟೆ ಯಡ್ತಾಡಿ ಗ್ರಾಮದಲ್ಲಿ ಸಂಭವಿಸಿದೆ.
ಯಡ್ತಾಡಿ ನಿವಾಸಿ ಭಾಗ್ಯಲಕ್ಷ್ಮೀ ಎಂಬವರು ತೀವ್ರ ಅನಾರೋಗ್ಯಪೀಡಿತರಾದ ಪತಿ ಶ್ರೀನಿವಾಸ ಪೂಜಾರಿ ಎಂಬವರಿಗೆ ಶುಶ್ರೂಷೆಗಾಗಿ ಉಡುಪಿಯ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ 28 ಸಾವಿರ ರೂ. ಮುಂಗಡ ಹಣ ನೀಡಿದ್ದರು.
ಜೂ.25ರಂದು ಹೋಮ್ ಬ್ರದರ್ ಸಚಿನ್ ಎಂಬಾತನ್ನು ಸಂಸ್ಥೆಯವರು ಕಳಿಸಿದ್ದು, ಜು.7ರಂದು ಆತ ಅಗತ್ಯ ಕೆಲಸ ಇರುವುದಾಗಿ ಹೇಳಿ ತನ್ನ ಊರಿಗೆ ಹೋಗಿದ್ದ.
ಜು. 28ರಂದು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಶುಶ್ರೂಷೆ ಮಾಡುತ್ತಿದ್ದ ಸಚಿನ್, ಶ್ರೀನಿವಾಸ ಪೂಜಾರಿ ಗಮನಕ್ಕೆ ಬಾರದೇ ಅವರ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಅವರ ಮೊಬೈಲ್‌ನಲ್ಲಿ ಯುಪಿಐ ಮೂಲಕ ಜೂ.25ರಿಂದ ಜು.7ರ ವರೆಗೆ ಹಂತ ಹಂತವಾಗಿ 1 ಲಕ್ಷ 60 ಸಾವಿರ 500 ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದು, ಆ ಬಗ್ಗೆ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯಲ್ಲಿ ವಿಚಾರಿಸಿದಾಗ ಆತನಿಗೂ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು. ಸಚಿನ್ ಮತ್ತು ವಿ ಕೇರ್ ಹೋಮ್ ಸಂಸ್ಥೆಯವರು ಸೇರಿಕೊಂಡು ವಂಚಿಸಿ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಭಾಗ್ಯಲಕ್ಷ್ಮಿ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.