ಲೋಕಬಂಧು ನ್ಯೂಸ್ | ಉಡುಪಿ, ಆ.20
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟಿನ ಸಂಚಾರಿ ಪೀಠವನ್ನು ಕರಾವಳಿ ಭಾಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ಯು ಆ್ಯಕ್ಟ್ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಆಗಸ್ಟ್ 22ರಂದು ಉಡುಪಿಯಲ್ಲಿ ಸಭೆ ನಡೆಯಲಿದೆ ಎಂದು ಸಮಿತಿಯ ಸ್ಥಾಪಕ, ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅಂದು ಅಪರಾಹ್ನ 3 ಗಂಟೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಭೆ ಆಯೋಜಿಸಲಾಗಿದೆ ಎಂದರು.
ಕರಾವಳಿಯಿಂದ ಬೆಂಗಳೂರಿನ ಹೈಕೋರ್ಟ್ ಪ್ರಕರಣಗಳ ವಿಚಾರಣೆಗೆ ತೆರಳಲು 900ರಿಂದ 1,000 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಬೇಕಾಗಿದ್ದು ಮಳೆಗಾಲದಲ್ಲಿ ಸಾರ್ವಜನಿಕರು, ಮಹಿಳೆಯರು ಹಾಗೂ ಕಕ್ಷಿದಾರರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಕರಾವಳಿಯಲ್ಲಿ ಪೀಠ ಸ್ಥಾಪನೆಯಾದರೆ ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯ ದೊರೆಯಲಿದೆ ಎಂದವರು ಹೇಳಿದರು.
ಸಭೆಯಲ್ಲಿ ವಕೀಲರು, ಪತ್ರಕರ್ತರು, ಸಾಮಾಜಿಕ ಹಾಗೂ ಉದ್ಯಮ ಸಂಘಟನೆಗಳು, ವಿದ್ಯಾರ್ಥಿ ಮತ್ತು ಕಾರ್ಮಿಕ ಸಂಘಟನೆಗಳು, ಮಾಜಿ ಸೈನಿಕರು, ಆಟೋ ಚಾಲಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಹೋರಾಟವನ್ನು ವಕೀಲರಿಗೆ ಸೀಮಿತಗೊಳಿಸದೆ ಇಡೀ ಕರಾವಳಿ ಜನತೆಯ ಧ್ವನಿಯಾಗಿಸುವ ಉದ್ದೇಶವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೌರ್ಣಮಿ ಪ್ರೇಮ್, ವಿಜಯ್ ಡಿ'ಸೋಜಾ, ಮಾಧವ ಕಾಮತ್, ಸರಿತಾ ಹಾಗೂ ಸುರೇಶ್ ಕಾಮತ್ ಉಪಸ್ಥಿತರಿದ್ದರು.
