ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಜ್ಞಾನ ಕಾರ್ಯದ ಅಂಗವಾಗಿ ಸುಧಾಗೀತಾದಿ ಪಾಠಪಂಚಕ ಹಾಗೂ ಮಂಗಲ ಮಹೋತ್ಸವ, ಗುರುವಂದನೆ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಿತು.
ಸೋಸಲೆ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಭಗವದ್ಗೀತೆ ಅರ್ಥ ಗಾಂಭೀರ್ಯದಿಂದ ಕೂಡಿದೆ. ಗ್ರಂಥವನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡಿದಾಗ ಅದರ ಮಹತ್ವ ತಿಳಿಯುತ್ತದೆ.
ಪ್ರಮಾಣ ಶಾಸ್ತ್ರದ ವಿಚಾರದಲ್ಲಿ ಮಧ್ವಾಚಾರ್ಯರ ಮೌಲ್ಯಗಳು ಅಪಾರವಾದುದು. ಅವರು ತಮ್ಮ ಅನುವ್ಯಾಖ್ಯಾನದಲ್ಲಿ ಬ್ರಹ್ಮಾಂಡದ ವಿಮರ್ಶೆ ಮಾಡಿದ್ದಾರೆ. ಸಾಕ್ಷಿ ಪ್ರಮಾಣದ ಮಹತ್ವವನ್ನು ಚೆನ್ನಾಗಿ ತಿಳಿದುಕೊಂಡಿದ್ದರು ಎಂದರು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ದೇವರು ಪಾಪಗಳನ್ನು ಅಪಹರಿಸುವ ಕಾರಣ ಆತನಿಗೆ ಹರಿ ಎಂದು ಹೆಸರಿದೆ. ದೇಶಕ್ಕೆ ತೊಂದರೆ ಮಾಡುವವರು ತೊಲಗುವಂತೆ ಹಾಗೂ ಒಳಿತು ಮಾಡುವವರಿಗೆ ಒಳ್ಳೆಯದು ಮಾಡುತ್ತಾನೆ ಎಂದರು.
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸುವರ್ಣತೀರ್ಥರು. ಅವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಅವರು ಹೋದಲ್ಲೆಲ್ಲ ಸುವರ್ಣಮಯ ಮಾಡಿದ್ದಾರೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಣ್ವಮಠದ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.
ಮಠದ ವಿದ್ವಾಂಸ ಡಾ.ಬಿ.ಗೋಪಾಲಾಚಾರ್ಯ ನಿರೂಪಿಸಿ, ವಂದಿಸಿದರು.
