600 ವಿಷಯ ತಜ್ಞರು ಔಟ್

ಲೋಕಬಂಧು ನ್ಯೂಸ್ | ನವದೆಹಲಿ, ಆ.19
ನೀಟ್, ಯುಜಿಸಿ-ನೆಟ್ ಸೇರಿದಂತೆ ಸರಣಿ ಪರೀಕ್ಷೆ ಅವಾಂತರಗಳ ಬೆನ್ನಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸಮಗ್ರ ಬದಲಾವಣೆಗೆ ಕೇಂದ್ರ ಉನ್ನತ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ನಿರ್ದೇಶನ ನೀಡಿದ್ದಾರೆ.
ಸಚಿವರ ಸೂಚನೆಯಂತೆ 'ಎನ್‌ಟಿಎ' ಅಡಿಯಲ್ಲಿ ಕೆಲಸ ಮಾಡುತ್ತಿದ್ದ 600 ಮಂದಿ ವಿಷಯ ತಜ್ಞರನ್ನು ಕೈಬಿಡಲಾಗಿದೆ. ನಾಲ್ಕು ಹಂತದ ಪ್ರಶ್ನೆಪತ್ರಿಕೆ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಎನ್‌ಟಿಎ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಭದ್ರತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಲಾಗುತ್ತಿದೆ.


ಪರೀಕ್ಷಾ ತಂಡವನ್ನು ಸಂಪೂರ್ಣ ಪುನಾರಚನೆ ಮಾಡಲಾಗುತ್ತಿದೆ. ಸುಧಾರಣೆಯ ಭಾಗವಾಗಿ 600 ಮಂದಿ ತಜ್ಞರನ್ನು ಕೈಬಿಟ್ಟು ಹೊಸ ಪರಿಣತರನ್ನು ನೇಮಿಸಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವಾಲಯ ಎಕ್ಸ್‌ ಖಾತೆ ಪೋಸ್ಟ್‌ನಲ್ಲಿ ಮಂಗಳವಾರ ತಿಳಿಸಿದೆ.


ಯುಜಿಸಿ-ನೆಟ್ ಪ್ರಶ್ನೆಪತ್ರಿಕೆಗಳ ದೋಷಗಳಿಂದ ಮೂರು ವಿಷಯಗಳಿಗೆ ಮರುಪರೀಕ್ಷೆ ಘೋಷಣೆ ಬೆನ್ನಿಗೇ ಸೋಮವಾರ ಸಭೆ ನಡೆಸಿದ ಸಚಿವ ಪ್ರಹ್ಲಾದ್‌ ಜೋಶಿ, ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆ (ಆಡಿಟ್) ನಡೆಸಬೇಕು. 30 ದಿನಗಳೊಳಗೆ ಸುಧಾರಣಾ ಕ್ರಮಗಳ ಕುರಿತ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.