ಲೋಕಬಂಧು ನ್ಯೂಸ್ ಉಡುಪಿ, ಆ.20
ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಆಡಳಿತದ ಅವಧಿಯಲ್ಲಿ ಸಮಸಮಾಜ ನಿರ್ಮಾಣದ ರೂವಾರಿಯಾಗಿ, ಹಿಂದುಳಿದ ವರ್ಗದವರು ಹಾಗೂ ದೀನ ದಲಿತರ ಏಳಿಗೆಗೆ ಧ್ವನಿಯಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಉಡುಪಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಉದ್ಘಾಟಿಸಿ, ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಬಸವಣ್ಣ ರೂಪಿಸಿದ್ದ ಸಮಾಜದಲ್ಲಿ ಸಮಾನತೆಯನ್ನು ದೇವರಾಜ ಅರಸು ಅದನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದರು. ಅರಸು ಜಾರಿಗೆ ತಂದಿರುವ ಸಾಮಾಜಿಕ ಕಾರ್ಯಕ್ರಮಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ. ಕರ್ನಾಟಕ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ ಡಿ.ದೇವರಾಜ ಅರಸು ದಮನಿತರ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ವ್ಯಕ್ತಿ. ರಾಜ್ಯದಲ್ಲಿ ಒಂದಿನಿತೂ ನೆತ್ತರು ಹರಿಸದೇ ಉಳುವವನನ್ನೇ ಭೂಮಿಯ ಒಡೆಯನ್ನಾಗಿ ಮಾಡಿದ ಧೀಮಂತ ನಾಯಕ ಅರಸು ಅವರ ವಿಚಾರಧಾರೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕೆ ಒತ್ತುನೀಡಿರುವ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಜನಪರ ಕೆಲಸ ಮಾಡಿದ ವ್ಯಕ್ತಿ ಜನಮಾನಸದಲ್ಲಿ ಅಚ್ಚಳಿಯದೇ ಜೀವಂತ ಉಳಿಯಲಿದ್ದಾರೆ ಎನ್ನುವುದಕ್ಕೆ ದೇವರಾಜ ಜಾರಿಗೆ ತಂದ ಕಾರ್ಯಕ್ರಮಗಳೇ ನಿದರ್ಶನ ಎಂದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಸಮಾಜದಲ್ಲಿ ಸಮಾನತೆ ಸಾರಿರುವ ದೇವರಾಜ ಅರಸು ಶೋಷಿತರಿಗೆ ಶಕ್ತಿ ತುಂಬಿ ಮೇಲಕ್ಕೆತ್ತಿದವರು. ಅವರು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ಪ್ರತಿರೂಪವಾಗಿದ್ದರು ಎಂದರು.
ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ್ ವಿಶೇಷ ಉಪನ್ಯಾಸ ನೀಡಿ, ಜೀವನದುದ್ದಕ್ಕೂ ಸರಳ ಜೀವನ ನಡೆಸಿದ್ದ ಅರಸು ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಹಿಂದುಳಿದ ವರ್ಗಗಳಿಗೆ ಹೊಸ ಶಕ್ತಿ, ಚೈತನ್ಯ ತುಂಬಿದ್ದರು. ಅವರು ಜಾರಿಗೆ ತಂದಿರುವ ಸಾಮಾಜಿಕ ಸುಧಾರಣೆಗಳು ಇಂದಿಗೂ ಹಲವರ ಬಾಳಿಗೆ ಬೆಳಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇಲಾಖಾ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಐ.ಟಿ.ಡಿ.ಪಿ. ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಂಕರ್ ಮೊದಲಾದವರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ ಸ್ವಾಗತಿಸಿ, ನಿಲಯದ ವಿದ್ಯಾರ್ಥಿನಿಯರಾದ ಚೈತ್ರಾ ಕೆ.ಸಿ. ಹಾಗೂ ಗಾನವಿ ನಿರೂಪಿಸಿದರು. ಉಡುಪಿ ತಾಲೂಕು ಕಲ್ಯಾಣ ಅಧಿಕಾರಿ ಶ್ರೀಕಾಂತ್ ವಂದಿಸಿದರು.