ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿಗೆ ಹಲ್ಲೆ: ಸಿಪಿಎಂ ಖಂಡನೆ

ಲೋಕಬಂಧು ನ್ಯೂಸ್ | ಕುಂದಾಪುರ, ಆ.21
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ.ಮಹೇಂದ್ರ‌ ಕುಮಾರ್ ಶೆಟ್ಟಿ ವಿರುದ್ಧ ಸಾರ್ವಜನಿಕರಿಂದ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಸಾರ್ವಜನಿಕವಾಗಿ ದೈಹಿಕ ಹಲ್ಲೆ ನಡೆಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ವೈದ್ಯರ ವಿರುದ್ಧ ಯಾವುದೇ ಆರೋಪಗಳು ಕೇಳಿಬಂದಿದ್ದರೂ, ಅವುಗಳ ಸತ್ಯಾಸತ್ಯತೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಿ ಸೂಕ್ತ ಕಾನೂನು ಕ್ರಮದ ಮೂಲಕ ಪರಿಹರಿಸಿಕೊಳ್ಳಬೇಕಾಗಿತ್ತು. ಆರೋಪಗಳು ಸತ್ಯವಲ್ಲದಿದ್ದರೆ ಸಂಬಂಧಪಟ್ಟ ದಾಖಲೆಗಳು ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ತಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸುವುದು ಸರಿಯಾದ ಮಾರ್ಗ. ಆದರೆ, ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.


ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಅವರ ಮೇಲೆ ದೈಹಿಕ ದಾಳಿ ನಡೆಸುವುದು ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ. ಅಲ್ಲದೆ, ವೈದ್ಯ ವೃತ್ತಿಗೆ ಸಮಾಜದಲ್ಲಿರುವ ಗೌರವ ಮತ್ತು ನಂಬಿಕೆಗೆ ಇಂಥ ವರ್ತನೆ ಅಪಖ್ಯಾತಿ ತರುವಂತಾಗಿದೆ.


ಆದ್ದರಿಂದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ಮಹೇಂದ್ರ‌ ಕುಮಾರ್ ಶೆಟ್ಟಿ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.