ಬಿಪಿಎಲ್: ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚಿಸಲು ಮನವಿ

ಲೋಕಬಂಧು ನ್ಯೂಸ್ ಉಡುಪಿ, ಆ.13
ಬಿಪಿಎಲ್ ಪಡಿತರ ಚೀಟಿ ಪಡೆಯಲು ಪ್ರಸ್ತುತ ಜಾರಿಯಲ್ಲಿರುವ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 1.20 ಲಕ್ಷವನ್ನು ರೂ.3 ಲಕ್ಷಕ್ಕೆ ಹೆಚ್ಚಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.ಪ್ರಸ್ತುತ ಬಿಪಿಎಲ್ ಪಡಿತರ ಚೀಟಿಗೆ ಅನ್ವಯವಾಗುತ್ತಿರುವ ರೂ. 1.20 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು 2017ರಲ್ಲಿ ನಿಗದಿಪಡಿಸಲಾಗಿದ್ದು, ಕಳೆದ 9 ವರ್ಷಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದಾಯ ಮಿತಿಯನ್ನು ಪರಿಷ್ಕರಿಸದ ಹಿನ್ನೆಲೆಯಲ್ಲಿ ಅನೇಕ ಬಡ ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ವಂಚಿತರಾಗಿದ್ದಾರೆ.


ಬಹುತೇಕ ಬಿಪಿಎಲ್ ಕುಟುಂಬಗಳ ಆದಾಯ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದಿನ ಆರ್ಥಿಕ ಪರಿಸ್ಥಿತಿ ಹಾಗೂ ಜೀವನ ನಿರ್ವಹಣೆಗೆ ಹೆಚ್ಚಾದ ವೆಚ್ಚವನ್ನು ಗಮನಿಸಿದರೆ ರೂ. 1.20 ಲಕ್ಷ ಆದಾಯ ಮಿತಿ ಈಗಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಯಶಪಾಲ್ ಸುವರ್ಣ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.


ಬಿಪಿಎಲ್ ಪಡಿತರ ಚೀಟಿಗೆ ವಾರ್ಷಿಕ ಆದಾಯ ಮಿತಿಯನ್ನು ರೂ. 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ನೈಜ ಅರ್ಹ ಕುಟುಂಬಗಳಿಗೆ ಆಹಾರ ಭದ್ರತೆ ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳ ಸೌಲಭ್ಯ ದೊರೆಯುವಂತೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.