ಗುತ್ತಿಗೆದಾರ ಡೇವಿಡ್ ಶೂಟೌಟ್ ಪ್ರಕರಣ: ನೈನಿತಾಲ್'ನಲ್ಲಿ ಮತ್ತೋರ್ವನ ಬಂಧನ

ಲೋಕಬಂಧು ನ್ಯೂಸ್ | ಉಡುಪಿ, ಆ.20
ಕಾಪು ತಾಲೂಕು ಮುದರಂಗಡಿ ಚರ್ಚ್ ಬಳಿ ಆ.7ರ ಸಂಜೆ ನಡೆದ ಉದ್ಯಮಿ ಡೇವಿಡ್ ಡಿ'ಸೋಜಾ ಶೂಟೌಟ್ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯ ಬಂಧನವಾಗಿದ್ದು, ಇತರ ಆರೋಪಿಗಳೊಂದಿಗೆ ಸೇರಿ ಸಂಚು ನಡೆಸಿ ಕೃತ್ಯಕ್ಕೆ ಹಣಕಾಸು ಪೂರೈಕೆ ಮಾಡಿದ್ದ ಆರೋಪಿಯೊಬ್ಬನನ್ನು ಉತ್ತರಾಖಂಡ ರಾಜ್ಯದಲ್ಲಿ ಬಂಧಿಸಲಾಗಿದ್ದು, ಬಂಧಿತನನ್ನು ಬಿಹಾರ ರಾಜ್ಯದ ಶೇಖ್ಪುರದ ಸೂರಜ್ ಕುಮಾರ್ (31) ಎಂದು ಗುರುತಿಸಲಾಗಿದೆ.
ತಲೆಮರೆಸಿಕೊಂಡಿದ್ದ ಆತನನ್ನು ಉತ್ತರಾಖಂಡದ ನೈನಿತಾಲ್'ನಲ್ಲಿ ಬಂಧಿಸಲಾಗಿದೆ. ಆ ಮೂಲಕ ಈ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳ ಸಂಖ್ಯೆ 8ಕ್ಕೇರಿದೆ.


ಆ.7ರಂದು ಅಪರಾಹ್ನ 3.45ರ ಸುಮಾರಿಗೆ ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್'ನಲ್ಲಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿ'ಸೋಜಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.


ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ರಾಜು, ಅನ್ನೋಲ್ ರಸ್ತೋಗಿ, ಜಿಯಾಹುಲ್ ವಾಜುಲ್ ಶೇಖ್ ಎಂಬವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ರಾಜು ಎಂಬಾತನ ಬಂಧನದ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದರು. ಗಾಯಗೊಂಡಿದ್ದ ಆತನಿಗೆ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದೇ ಪ್ರಕರಣದಲ್ಲಿ ಇತರ ಆರೋಪಿಗಳೊಂದಿಗೆ ಸೇರಿ ಅಪರಾಧ ಒಳಸಂಚು ನಡೆಸಿ ಹಣಕಾಸು ಪೂರೈಕೆ ಮಾಡಿದ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಎಂಬವರನ್ನು ಬಳಿಕ ಬಂದಿಸಲಾಗಿದೆ. ಇದೀಗ ಮತ್ತೋರ್ವ ಆರೋಪಿ ಸೂರಜ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.