ಲೋಕಬಂಧು ನ್ಯೂಸ್ | ಉಡುಪಿ, ಆ.21
ಮುದರಂಗಡಿ ಉದ್ಯಮಿ ಡೇವಿಡ್ ಡಿ'ಸೋಜಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಕೊಲೆ ಆರೋಪಿಗಳಿಗೆ ಮೋಟಾರ್ ಬೈಕ್ ನೀಡಿದ್ದ ಬೈಂದೂರು ಯಡ್ತರೆ ನಿವಾಸಿ ಲೋಕೇಶ ತೇಜ ಕೊಠಾರಿ (42) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಆತ ಈ ಮೊದಲು ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿಯ ಸ್ನೇಹಿತ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿ ಅನ್ಮೋಲ್ ರಸ್ತೋಗಿ ಹಾಗೂ ರಾಜು ಅವರಿಗೆ ಮೋಟಾರ್ ಸೈಕಲ್ ಒದಗಿಸಿ ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಅಪರಾಧಿಕ ಒಳಸಂಚು ರೂಪಿಸುವಲ್ಲಿ ಲೋಕೇಶ ಸಹಕಾರಿಯಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಆತನನ್ನು ಬೈಂದೂರಿನ ಯಡ್ತರೆ ಎಂಬಲ್ಲಿ ವಶಕ್ಕೆ ಪಡೆದು, ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
