ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ

ಲೋಕಬಂಧು ನ್ಯೂಸ್ ಉಡುಪಿ, ಆ.1
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಆಡಳಿತದಿಂದ ಹಿಡಿದು ಡಿ.ಕೆ. ಶಿವಕುಮಾರ್ ವರೆಗೆ ಸಂಪೂರ್ಣ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು ಏಜೆಂಟ್'ಗಳಂತೆ ವರ್ತಿಸುತ್ತಾ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಾರದಂತೆ ತಡೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಆರೀಪಿಸಿದರು.ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿ, ಕಂದಾಯ, ಹಾಸ್ಟೆಲ್, ಸಮಾಜ ಕಲ್ಯಾಣ ಹಾಗೂ ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಕಾಮಗಾರಿ ಮಾಡಿಸುವವರು ಶೇ. 40 ಲಂಚ ನೀಡಿ ಟೆಂಡರ್ ಪಡೆಯುವಂತಾಗಿದ್ದು, ಶೇ.60ರಷ್ಟು ಪರ್ಸೆಂಟ್ ಕಮಿಷನ್ ಹೋಗುತ್ತಿದೆ. ಜಿಲ್ಲಾಧಿಕಾರಿ, ಪಿಡಿಒದಿಂದ ಹಿಡಿದು ಜಿಲ್ಲಾ ಪಂಚಾಯತ್'ವರೆಗೆ ಭ್ರಷ್ಟಾಚಾರ ಹರಡಿದ್ದು, ಇದು ಇತ್ತೀಚಿನ ಸ್ಟಿಂಗ್ ಆಪರೇಷನ್ ಮೂಲಕವೂ ಜಗಜ್ಜಾಹೀರಾಗಿದೆ ಎಂದರು.


ಧ್ವಜ ಹಾರಿಸುವುದಕ್ಕಷ್ಟೇ ಸೀಮಿತ!
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಧ್ವಜ ಹಾರಿಸುವುದಕ್ಕೆ ಮಾತ್ರ ಸೀಮಿತವಾಗಬಾರದು ಎಂದ ಮಟ್ಟಾರು, ರಾಜ್ಯದಲ್ಲಿ ಪೊಲೀಸರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಹಾಕಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಣಿಪಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದರೂ ಪೊಲೀಸರು ಒತ್ತಡಕ್ಕೆ ಮಣಿದು ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ ಎಂದು ಕಿಡಿಕಾರಿದರು.


ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸೂಕ್ತ ರೂಪುರೇಷೆ ಸಿದ್ಧಪಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಮುಖಂಡರು ಪರೋಕ್ಷವಾಗಿ ಅಕ್ರಮ ಮರಳುಗಾರಿಕೆ ದಂಧೆಗೆ ಸಹಕಾರ ನೀಡುತ್ತಿದ್ದಾರೆ. ಈ ಎಲ್ಲಾ ಜನವಿರೋಧಿ ಧೋರಣೆಗಳನ್ನು ಬಿಜೆಪಿ ಉಗ್ರವಾಗಿ ವಿರೋಧಿಸಲಿದೆ ಎಂದು ಎಚ್ಚರಿಸಿದರು.


ಸುದ್ದಿಗೋಷ್ಟಿಯಲ್ಲಿ ಮಧುಕರ ಮುದ್ರಾಡಿ, ದಿವಾಕರ ಶೆಟ್ಟಿ, ಪ್ರಶಾಂತ್ ಶಿವತ್ತಾಯ ಹಾಗೂ ದಿನೇಶ್ ಅಮೀನ್ ಇದ್ದರು.