ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಗೆ ಡಿವೈಎಫ್ಐ ಖಂಡನೆ

ಲೋಕಬಂಧು ನ್ಯೂಸ್ | ಮಂಗಳೂರು, ಆ.21
ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿದ್ದ ಡಾ. ಮಹೇಂದ್ರ ಶೆಟ್ಟಿ ವಿರುದ್ಧ ಕೇಳಿ‌ ಬಂದಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಖಂಡಿಸಿದೆ. ಆರೋಪಿ ಡಾ.ಮಹೇಂದ್ರ‌ ಕುಮಾರ್ ಶೆಟ್ಟಿಯನ್ನು ಕೂಡಲೇ ಬಂಧನಗೊಳಪಡಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಸರಕಾರಿ ಆರೋಗ್ಯ ಕ್ಷೇತ್ರದಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಸ್ತುನಿಷ್ಠವಾಗಿ ವರದಿ ಮಾಡುತ್ತಾ, ಅಸಹಾಯಕರು, ಶೋಷಿತರು ಹಾಗೂ ಧಮನಿತರ ಪರವಾಗಿ ನಿಂತ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ನಡೆದಿರುವ ಹಲ್ಲೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿ ಎಂದು ಡಿವೈಎಫ್ಐ ಆರೋಪಿಸಿದೆ.


ಜನರ ತೆರಿಗೆಯ ಹಣದಿಂದ ನಡೆಯುವ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವುದು ಮತ್ತು ಅದನ್ನು ಸಾರ್ವಜನಿಕರ ಗಮನಕ್ಕೆ ತರುವುದು ಪತ್ರಕರ್ತರ ಹಕ್ಕು ಹಾಗೂ ಕರ್ತವ್ಯ. ಇಂಥ ವರದಿಗಳನ್ನು ಪ್ರಶ್ನಿಸಲು ಕಾನೂನುಬದ್ಧ ಮಾರ್ಗಗಳಿವೆ. ಆದರೆ, ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವದ ಮೂಲ ಆಶಯಗಳ ಮೇಲಿನ ದಾಳಿಯಾಗಿದೆ.


ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಘಟನೆಗೆ ಕಾರಣರಾದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಅವರ ವಿರುದ್ಧ ನಡೆದಿರುವ ಹಲ್ಲೆ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಮುಖಂಡ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.